ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಮುಂಡಕೈ ಪ್ರದೇಶದಲ್ಲಿ ೧೮ ಮೃತದೇಹಗಳು ಪತ್ತೆಯಾಗಿದ್ದು, ಚಲಿಯಾರ್ ನದಿಯಿಂದ ೫ ಮೃತದೇಹಗಳು ಹಾಗೂ ೧೦ ದೇಹದ ಭಾಗಗಳಲ್ಲಿ ಹೊರತೆಗೆಯಲಾಗಿದೆ. ಇದರಿಂದಾಗಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೩೦ ಕ್ಕೆ ಏರಿಕೆಯಾಗಿದೆ. ಇನ್ನೂ ೨೮೦ ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಭಾರತೀಯ ಸೇನೆ, ನೌಕಾದಳ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಹಲವು ವಿಭಾಗಗಳು ಸೇರಿದಂತೆ ಒಟ್ಟು ೬೪೦ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಸೇನಾ ಹೆಲಿಕಾಪ್ಟರ್ ಗಳ ಹೊರತಾಗಿ ಪೊಲೀಸ್ ಇಲಾಖೆಯಿಂದ ನಿಯೋಜಿಸಲ್ಪಟ್ಟ ಹೆಲಿಕಾಪ್ಟರ್ ಗಳೂ ಸಹ ಚಲಿಯಾರ್ ನದಿ ದಡದಲ್ಲಿ ದುರಂತ ಉಂಟಾದ ಸ್ಥಳಗಳಲ್ಲಿ ತಪಾಸಣೆ ನಡೆಸಿವೆ.
೮೪ ಮಂದಿಗೆ ವಯನಾಡ್, ಕೋಝಿಕ್ಕೋಡ್, ಮಲಪ್ಪುರಂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ೧೮೭ ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಕೇರಳ ಕಾರ್ಮಿಕ ಸಚಿವರ ಮಾಹಿತಿಯ ಪ್ರಕಾರ ವಯನಾಡ್ ನಲ್ಲಿ ಬಂಗಾಳದ ಒಟ್ಟು ೨೪೨ ಕಾರ್ಮಿಕರು ಸಿಲುಕಿದ್ದು, ಈ ಪೈಕಿ ೨೦೦ ಕಾರ್ಮಿಕರನ್ನು ಸಂಪರ್ಕಿಸಲಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭೂಕುಸಿತಕ್ಕೆ ಒಳಗಾದ ಹಳ್ಳಿಯಲ್ಲಿ ಸುಧಾರಿತ ರಾಡಾರ್ ವ್ಯವಸ್ಥೆಯನ್ನು ಬಳಸಿಕೊಂಡು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವರು, ಯಾವುದಾದರೂ ವ್ಯಕ್ತಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರೂ ಬದುಕಿ ಉಳಿದು ಉಸಿರಾಡುತ್ತಿದ್ದಾರೆಯೇ? ಎಂಬುದನ್ನು ಪತ್ತೆಹಚ್ಚಿದರು, ಆದರೆ ರಡಾರ್ ನ ಸಿಗ್ನಲ್ ಪ್ರಾಣಿಯಿಂದ ಬಂದಿರಬಹುದು ಎನ್ನಲಾಗುತ್ತಿದೆ. ಗಂಟೆಗಳ ಹುಡುಕಾಟದ ನಂತರ, ಅದು ಮನುಷ್ಯರಿಗೆ ಸಂಬಂಧಿಸಿದ ಸಿಗ್ನಲ್ ಅಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮತ್ತು ಅವಶೇಷಗಳ ಅಡಿಯಲ್ಲಿ ಯಾವುದೇ ಮಾನವರು ಕಂಡುಬಂದಿಲ್ಲ. ರಡಾರ್ ನ ಸಂಕೇತ ಹಾವು ಅಥವಾ ಕಪ್ಪೆಯಿಂದ ಬಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು, ಒಮ್ಮೆ ಮನೆ ಇದ್ದ ಪ್ರದೇಶವನ್ನು ಹುಡುಕುತ್ತಿರುವಾಗ ರಾಡಾರ್‌ನಿಂದ ಬ್ಲೂ ಸಿಗ್ನಲ್ ಪತ್ತೆಯಾಗಿದೆ ಎಂದು ವರದಿ ಮಾಡಿದ್ದಾರೆ. ಉಸಿರಾಟದ ಸ್ಥಿರ ಸಂಕೇತವಿದೆ ಎಂದು ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದರು. ಸ್ಥಳೀಯ ನಿವಾಸಿಗಳ ಪ್ರಕಾರ, ಮನೆಯ ಅಡುಗೆ ಕೋಣೆ ಮತ್ತು ಸ್ಟೋರ್ ರೂಂ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿದೆ. ಸಿಗ್ನಲ್ ಆಧರಿಸಿ, ರಕ್ಷಕರು ಸ್ಥಳಕ್ಕೆ ಅಗೆಯಲು ಪ್ರಾರಂಭಿಸಿದ್ದಾರೆ.
ಕಟ್ಟಡದ ಅವಶೇಷಗಳನ್ನು ಮಣ್ಣಿನ ಕೆಳಗೆ ಸುಮಾರು ಎರಡರಿಂದ ಮೂರು ಮೀಟರ್‌ಗಳಷ್ಟು ಹೂಳಲಾಗಿದೆ, ಇದರಿಂದಾಗಿ ಸಿಗ್ನಲ್ ಮಾನವ ಅಥವಾ ಪ್ರಾಣಿಯಿಂದ ಬಂದಿದೆಯೇ ಎಂದು ನಿರ್ಧರಿಸಲು ಕಷ್ಟವಾಗುತ್ತದೆ. ಮನೆಯ ಅಡುಗೆ ಕೋಣೆ ಮತ್ತು ಸ್ಟೋರ್ ರೂಂ ಇರುವ ಪ್ರದೇಶದಲ್ಲಿ ಸಿಗ್ನಲ್ ಪತ್ತೆಯಾಗಿತ್ತು.