ಪಾಂಡವಪುರ : ಸಾಲಬಾಧೆಯಿಂದ ಮಹಿಳೆಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪದ್ಮರಾಜು ಎಂಬವರ ಪತ್ನಿ ಸುಲೋಚನಾ(೩೨) ಮೃತ ದುರ್ದೈವಿ ಮಹಿಳೆ. ಇವರಿಗೆ ಮೂವರು ಮಕ್ಕಳು ಇದ್ದಾರೆ. ಹಿರಿಯ ಮಗಳು ಲಿಖಿತಾ ಪಿಯುಸಿ, ಎರಡನೇ ಮಗ ನಂದನ್‌ಗೌಡ ೬ ಮತ್ತು ಮೂರನೇ ಮಗಳು ಜನನಿ ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಮೃತ ಮಹಿಳೆ ಕೆಲವು ಸಂಘ ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದಿದ್ದರು. ಸಾಲ ವಸೂಲಿಗೆ ಬರುತ್ತಿದ್ದ ಪ್ರತಿನಿಧಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ಮಗಳು ಜನನಿ ಮಾಧ್ಯಮದವರಿಗೆ ಹೇಳಿಕೆ ನೀಡಿದರು. ಈ ಬಗ್ಗೆ ಪದ್ಮರಾಜು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದು, ಶವವನ್ನು ವಾರಸುದಾರರಿಗೆ ನೀಡಲಾಯಿತು.