ಕಿನ್ಶಾಸಾ (ಕಾಂಗೋ) : ಕಾಂಗೋದಲ್ಲಿ ಪ್ರಕೃತಿಯ ರೌದ್ರನರ್ತನ ಮುಂದುವರಿದಿದೆ. ಮಧ್ಯ ಕಾಂಗೋದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಒಂದೇ ಕುಟುಂಬದ ೧೦ ಮಂದಿ ಸೇರಿದಂತೆ ೨೨ ಜನರು ಸಾವನ್ನಪ್ಪಿದ್ದಾರೆ.
ಕನಂಗಾ ಜಿಲ್ಲೆಯಲ್ಲಿ ಹಲವು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ನೀರು ಹರಿದುಬಂದಿದೆ. ಇದರಿಂದ ಈ ಪ್ರದೇಶದ ಅನೇಕ ಮನೆಗಳು ಮುಳುಗಡೆಯಾಗಿವೆ. ಇದರಲ್ಲಿ ಜನರು ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಈ ಪ್ರಾಂತ್ಯದ ಗವರ್ನರ್ ಜಾನ್ ಕಬೆಯಾ ತಿಳಿಸಿದರು.
ಆರಂಭದಲ್ಲಿ ಪ್ರವಾಹಕ್ಕೆ ೧೭ ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿತ್ತು. ಬಳಿಕ ಇನ್ನೂ ಐವರು ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ. ಇದರಿಂದ ಈವರೆಗೂ ೨೨ ಮಂದಿ ಪ್ರಕೃತಿ ವಿಕೋಪಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.