ಯಳಂದೂರು: ನವೆಂಬರ್ ಒಂದರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಅಷ್ಟೇ ಅರ್ಥಪೂರ್ಣವಾಗಿ ತಾಲೂಕು ಆಡಳಿತದ ವತಿಯಿಂದ ನಡೆಸಲು ತೀರ್ಮಾನಿಸಲಾಯಿತು. ಈ ಸಂಬಂಧ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಹಶೀಲ್ದಾರ್ ಜಯಪ್ರಕಾಶ್ ನೇತೃತ್ವದಲ್ಲಿ ಗುರುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ರಾಜ್ಯೋತ್ಸವ ನಿಮಿತ್ತ ಮಿನಿವಿಧಾನಸೌಧದ ಕಟ್ಟಡದ ಮುಂಭಾಗ ರಾಷ್ಟ್ರ ಹಾಗೂ ನಾಡಧ್ವಜಾರೋಹಣ ನೆರವೇರಿಸುವುದು ನಂತರ ವಿವಿಧ ಶಾಲಾ ಕಾಲೇಜು, ಇಲಾಖೆಯ ವತಿಯಿಂದ ಟ್ಯಾಬ್ಲೋಗಳು ಕಲಾತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವುದು. ಅಂದು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸುವುದು.
ವರ್ತಕರರ ಸಂಘದ ಸಹಯೋಗದೊಂದಿಗೆ ಎಲ್ಲಾ ಪ್ರಮುಖ ಅಂಗಡಿ ಮುಂಗಟ್ಟೆಗಳ ಮುಂಭಾಗ ಕನ್ನಡದ ಬಾವುಟಗಳನ್ನು ಕಡ್ಡಾಯವಾಗಿ ಹಾಕುವುದು, ವಿದ್ಯುತ್ ದೀಪಾಲಂಕರಾರ ಮಾಡುವುದು. ಸರ್ಕಾರದ ಸೂಚನೆಯಂತೆ ೭ ಕನ್ನಡ ಗೀತೆಗಳನ್ನು ಹಾಡಿಸುವುದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು. ಕನ್ನಡ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡುವುದು. ಮೈಸೂರು ಅನಂತಸ್ವಾಮಿಯ ಸಂಯೋಜನೆಯ ನಾಡಗೀತೆಯನ್ನು ಹಾಡಿಸುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.
ಇದರೊಂದಿಗೆ ಅಂದು ಎಲ್ಲಾ ಕಚೇರಿ ಪುರುಷ ಸಿಬ್ಬಂಧಿ ಬಿಳಿ ಷರ್ಟ್ ಹಾಗೂ ಬಿಳಿ ಪಂಚೆಯುಟ್ಟು ಬರುವುದು, ಮಹಿಳೆಯರು ಸೀರೆ ಉಟ್ಟು ಬರುವುದು. ಕಡ್ಡಾಯವಾಗಿ ಎಲ್ಲಾ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಹಾಜರಿರಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಯಿತು. ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಬಿ. ರವಿ, ತಹಶೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಬಿಇಒ ಕೆ. ಕಾಂತರಾಜು, ಪಿಎಸ್‌ಐ ಚಂದ್ರಹಾಸನಾಯಕ್, ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಇಸಿಒ ಶಿವಲಂಕಾರ್ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ ಸೇರಿದಂತೆ ಅನೇಕರು ಹಾಜರಿದ್ದರು.