ಹೊಸೂರು: ಪ್ರಸಕ್ತ ಕಾವೇರಿ ಜಲಾನಯದ ಹಾರಂಗಿ ಜಲಾಶಯಡಿ ಲಭ್ಯವಿರುವ ನೀರಿನ ಮಟ್ಟ ಮತ್ತು ಸಂಗ್ರಹಣೆಯನ್ನು ಪರಿಗಣಿಸಲಾಗಿ ಜುಲೈ 2024ರ ವರೆಗೆ ಕುಡಿಯುವ ನೀರು ಮತ್ತು ಕೈಗಾರಿಕೆ ಬಳಕೆಗಾಗಿ ಅವಶ್ಯಕವಿರುವ ನೀರಿನ ಪೂರೈಕೆ ಗಮನದಲ್ಲಿರಿಸಿ ಡಿಸೆಂಬರ್ -1 2023 ರಿಂದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನೀರಾವರಿ ಉದ್ದೇಶಕ್ಕಾಗಿ ನೀರು ಹರಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.
ಕಾವೇರಿ ಜಲಾನಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಲಭ್ಯವಿರುವ ನೀರಿನ ಸಂಗ್ರಹಣೆಯನ್ನು ಕುಡಿಯುವ ನೀರು ಮತ್ತು ಕೈಗಾರಿಕೆ ಬಳಕೆಗಾಗಿ ಕಾಯ್ದಿರಿಸುವ ಹಾಗೂ ನೀರಾವರಿಗಾಗಿ ಕಾಲುವೆ ಜಾಲಗಳಿಂದ ನೀರು ಹರಿಸದಿರಲು ನಿರ್ಧರಿಸುವ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆ ಜರುಗಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸೂಚಿಸಿದೆ.
ಕೆ.ಆರ್.ನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಆಣೆಕಟ್ಟು ನಾಲೆಗಳಾದ ಚಾಮರಾಜ ಎಡದಂಡೆ ನಾಲೆ ಮತ್ತು ಚಾಮರಾಜ ಬಲದಂಡೆ ನಾಲೆ, ರಾಮಸಮುದ್ರ ಅಣೆಕಟ್ಟು ನಾಲಾ ಹಾಗೂ ಮಿರ್ಲೆ ಶ್ರೇಣಿ ನಾಲೆಗಳಲ್ಲಿ 2023-24 ನೇ ಸಾಲಿನ ಬೇಸಿಗೆ ಸಮಯದಲ್ಲಿ ಯಾವುದೇ ಕೃಷಿ ಚಟುವಟಿಕೆಗಾಗಿ ಹಾಗೂ ಜಾತ್ರಾ ಕಾರ್ಯಕ್ರಮಗಳಿಗೆ ನೀರನ್ನು ಹರಿಸಲು ಸಾಧ್ಯವಾಗುವುದಿಲ್ಲ ಎಂದು ನೀರಾವರಿ ಇಲಾಖೆ ತಿಳಿಸಿದೆ.
ಆಣೆಕಟ್ಟೆಗಳಲ್ಲಿ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಸಲು ಉದ್ದೇಶಿಸಲಾಗಿದೆ. ಆದ್ದರಿಂದ ಸದರಿ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟುದಾರರಿಗೆ ತಿಳಿಯಪಡಿಸುವುದು. ಏನೆಂದರೆ ತಾವುಗಳು ನೀರಾವರಿ ಅವಲಂಬಿತ ಯಾವುದೇ ಕೃಷಿ ಚಟುವಟಿಕೆಗಳಿಗೆ ತೊಡಗದಂತೆ ಹಾಗೂ ಯಾವುದೇ ರೀತಿಯ ಕಾಲುವೆ ನೀರಿಗೆ ಅವಲಂಬಿತರಾಗದಂತೆ ಇಲಾಖೆಯೊಂದಿಗೆ ಸಹಕರಿಸಲು ಕೋರಿದೆ. ತಪ್ಪಿದಲ್ಲಿ ನೀರಾವರಿ ಇಲಾಖೆಯವರು ಜವಾಬ್ದಾರಿಯಾಗುವುದಿಲ್ಲ ಎಂದು ಸಾಲಿಗ್ರಾಮ ಹಾರಂಗಿ ನೀರಾವರಿ ಇಲಾಖೆಯ ಇಇ ಈರಣ್ಣ ಮತ್ತು ಕೆ.ಆರ್.ನಗರ ನಂ-5 ಎಇಇ ಗುರುರಾಜ್ ತಿಳಿಸಿದ್ದಾರೆ.