ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಫೆಬ್ರವರಿ 4ರವರೆಗೆ ವಿಸ್ತರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ಗುರುವಾರ ನಡೆದ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿಯ ಮಹತ್ವದ ಸಭೆಯಲ್ಲಿ ಈ ತೀರ್ಮಾನಕ್ಕೆ ಒಮ್ಮತ ವ್ಯಕ್ತವಾಗಿದೆ.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಸರ್ಕಾರ ಮತ್ತು ವಿರೋಧ ಪಕ್ಷದ ಹಲವು ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳು, ವಿಧೇಯಕಗಳು ಹಾಗೂ ನಡೆಯುತ್ತಿರುವ ಸುದೀರ್ಘ ಚರ್ಚೆಗಳ ಹಿನ್ನೆಲೆಯಲ್ಲಿ ಅಧಿವೇಶನ ವಿಸ್ತರಣೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಶಾಸನಾತ್ಮಕ ಕಾರ್ಯಗಳು, ಆಡಳಿತಾತ್ಮಕ ನಿರ್ಧಾರಗಳು ಹಾಗೂ ಜನಪರ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಸುವ ಸಲುವಾಗಿ ಅಧಿವೇಶನವನ್ನು ಫೆಬ್ರವರಿ 4ರವರೆಗೆ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ವಿಸ್ತರಣೆಯೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಚರ್ಚೆಗಳು ಹಾಗೂ ನಿರ್ಣಯಗಳು ನಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.



