ಬೆಂಗಳೂರು: ಕೃಷ್ಣಾ ಜಲಾನಯನ ಪ್ರದೇಶದ (ಬಾಗಲಕೋಟೆ, ಕಲ್ಬುರ್ಗಿ ಮತ್ತು ವಿಜಯಪುರ) ರೈತರ ಸಮಸ್ಯೆಗಳನ್ನು ಪರಿಹರಿಸಲು ಆಲಮಟ್ಟಿ ಅಣೆಕಟ್ಟಿನಿಂದ 2.75 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ತಿಳಿಸಿದರು.
ಕೃಷ್ಣಾ ಜಲಾನಯನ ಪ್ರದೇಶದ ತೀವ್ರ ನೀರಿನ ಕೊರತೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಶನಿವಾರ ಎಲ್ಲ ಪಕ್ಷಗಳ ಶಾಸಕರು, ರೈತ ಮುಖಂಡರ ಜೊತೆಗೆ ಸಭೆ ನಡೆಸಲಾಗಿದ್ದು, ವಾಸ್ತವ ಪರಿಸ್ಥಿತಿ ವಿವರಿಸಿ ನೀರು ಬಿಡಲು ಒತ್ತಾಯಿಸಿದ್ದಾರೆ. ರೈತರ ರಕ್ಷಣೆ ಉದ್ದೇಶದಿಂದ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದರು.
ಆಲಮಟ್ಟಿ, ನಾರಾಯಣಪುರ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿನ ಪ್ರಮುಖ ಜಲಾಶಯಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸ್ತುತ ಶೇ. 50ಕ್ಕೂ ಅಧಿಕ ನೀರಿನ ಸಂಗ್ರಹ ಕೊರತೆ ಎದುರಿಸುತ್ತಿದ್ದು, ರಾಜ್ಯ ಜಲ ನೀತಿಯ ಆದ್ಯತೆಗೆ ಒತ್ತು ನೀಡಲಾಗಿದೆ. ಕುಡಿಯುವ ನೀರು, ಮುಂಬರುವ ಬೇಸಿಗೆಯಲ್ಲಿ ಸಾರ್ವಜನಿಕ ಬಳಕೆ ಮತ್ತು ಜಾನುವಾರುಗಳಿಗೆ ನೀರಿನ ಸಂಪನ್ಮೂಲಗಳನ್ನು ಸುರಕ್ಷಿತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಮನವಿಗೆ ಸ್ಪಂದಿಸಿದ ಸರ್ಕಾರ ಕೂಡಲೇ ನಾಲೆಗಳಿಗೆ 2.75 ಟಿಎಂಸಿ ನೀರು ಬಿಡಲು ನಿರ್ಧರಿಸಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುತ್ತಿರುವ ಮೆಣಸಿನಕಾಯಿ ಬೆಳೆಗಳನ್ನು ರಕ್ಷಿಸಲು ಮತ್ತು ಮುಂಬರುವ ಬೇಸಿಗೆಯಲ್ಲಿ ನಿರೀಕ್ಷಿತ ನೀರಿನ ಬೇಡಿಕೆಯನ್ನು ಪರಿಹರಿಸುವ ಗುರಿ ಹೊಂದಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಅಚ್ಚುಕಟ್ಟು ಭಾಗದ ರೈತರು ಬಿಡುಗಡೆಯಾಗಿರುವ 2.75 ಟಿಎಂಸಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.