ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ನಾಶಿಪುಡಿ, ಇಲ್ತಾಜ್ ಹಾಗೂ ಮುನಾವರ್ ಬಂಧಿತರು. ರಾಜ್ಯಸಭಾ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್‌ನ ಸೈಯ್ಯದ್ ನಾಸಿರ್ ಹುಸೇನ್ ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆಂಬ ಆರೋಪವಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ. ಪ್ರಕರಣದ ವಿಡಿಯೊಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಪರಿಶೀಲನೆ ಹಂತದಲ್ಲಿದೆ. ಜೊತೆಗೆ, ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಲಾಗಿತ್ತು. ವಿಡಿಯೊದಲ್ಲಿರುವ ಧ್ವನಿಗೂ ಆರೋಪಿಗಳ ಧ್ವನಿಗೂ ಹೋಲಿಕೆ ಆಗಿದೆ. ಹೀಗಾಗಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂವರನ್ನು ಬಂಧಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಲು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದರು.