ಯಳಂದೂರು: ಸಮೀಪದ ಹುಲ್ಲೇಪುರ ಗ್ರಾಮದಲ್ಲಿ ಈಚಗೆ ಆದಿಶಕ್ತಿ ಗೋಣಹಳ್ಳಿ ಮಾರಮ್ಮತಾಯಿ ದೇಗುಲವನ್ನು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತ ಮಾನಂದಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.
ಇದರ ನಿಮಿತ್ತ ವಿವಿದ ಹೋಮಹವನಗಳನ್ನು ನಡೆಸಿ ನಂತರ ದೇಗುಲದ ಕಳಸಾರೋಹಣವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪುರುಷೋತ್ತ ಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮದಲ್ಲಿ ವಿವಿಧ ಧಾರ್ಮಿಕ ಆಚರಣೆಗಳಿಗೆ ಮಹತ್ವದ ಅರ್ಥವಿರುತ್ತದೆ. ಎಲ್ಲ ಆಚರಣೆಗಳೂ ವೈಜ್ಞಾನಿಕವಾಗಿರುತ್ತದೆ. ದೇಗುಲಗಳು ನೆಮ್ಮದಿಯ ತಾಣಗಳಾಗಬೇಕು. ನಮ್ಮ ಧರ್ಮದಲ್ಲಿ ತಾಯಿತಂದೆಯನ್ನು ದೇವರಂತೆ ಕಾಣುವ ಆಚಾರವಿದೆ. ಇದನ್ನು ಎಲ್ಲರೂ ಅರಿಯಬೇಕು. ನಮ್ಮ ಪೋಷಕರು ಹಾಗೂ ಗುರುಹಿರಿಯರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಈ ಗ್ರಾಮದಲ್ಲಿ ಉಪ್ಪಾರ ಸಮುದಾಯದವರು ಒಂದು ಸುಂದರವಾದ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ. ಈ ದೇಗುಲ ಶಕ್ತಿ ಕೇಂದ್ರವಾಗಿ ಪರಿವರ್ತಿಸುವ ಕೆಲಸವನ್ನು ಎಲ್ಲರೂ ಶ್ರದ್ಧೆ, ಭಕ್ತಿಗಳಿಂದ ಮಾಡಬೇಕು ಎಂದು ನುಡಿದರು.
ಇದಕ್ಕೂ ಮುಂಚೆ ದೇಗುಲಕ್ಕೆ ಕಳಸ ಹೊತ್ತ ಹೆಣ್ಣುಮಕ್ಕಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಸರಗೂರು ಮಠದ ಮಹಾದೇವಸ್ವಾಮಿಜಿ, ಮಂಗಲಗಡಿಯ ಮಂಜುನಾಥಸ್ವಾಮಿ ಸೇರಿದಂತೆ ಗ್ರಾಮದ ಯಜಮಾನರು, ಮುಖಂಡರು, ಹಾಗೂ ಸಾರ್ವಜನಿಕರು ಇದ್ದರು.