ಬೆಂಗಳೂರು: ನ್ಯಾಯಾಲಯದ ಮಧ್ಯಾಂತರ ಆದೇಶ ಉಲ್ಲಂಘಿಸಿ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಅದರ ಮುಖ್ಯಸ್ಥರು ಹಾಗೂ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ವೀಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಯುಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, 10 ಕೋಟಿ ರೂ. ಪರಿಹಾರ ಕೋರಿ ಈ ಮಾನನಷ್ಟ ದಾವೆ ದಾಖಲಿಸಲಾಗಿದೆ.
ಈ ಸಂಬಂಧ ಡಿ. ನಿಶ್ಚಲ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಅವರು ಮೂಲ ದಾವೆ ಸಲ್ಲಿಸಿದ್ದಾರೆ. ದಾವೆಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ನಟರಾಜ್ ಅವರು, ಯೂಟ್ಯೂಬರ್ ಎಂ.ಡಿ. ಸಮೀರ್- ದೂತ ಯೂಟ್ಯೂಬ್ ಚಾನೆಲ್‌ಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ ವಿವಾದಿತ ವೀಡಿಯೊವನ್ನು ಯುಟ್ಯೂಬ್ ಚಾನಲ್‌ನಿಂದ ತತ್‌ಕ್ಷಣ ತೆಗೆದುಹಾಕುವಂತೆ ಸಮೀರ್‌ಗೆ ಸೂಚನೆ ನೀಡಿ ದಾವೆಯ ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಮುಖ್ಯಸ್ಥರು ಮತ್ತು ಕುಟುಂಬ ಸದಸ್ಯರ ಘನತೆಗೆ ಹಾನಿಯಾಗುವಂತೆ ದೂತ ಯೂಟ್ಯೂಬ್ ಚಾನೆಲ್‌ನಲ್ಲಿ ಧರ್ಮಸ್ಥಳ ವಿಲೇಜ್ ಹಾರರ್ ಪಾರ್ಟ್-2/ಸಾಕ್ಷಿ ನಾಶ/ಸೌಜನ್ಯ ಕೇಸ್ ಹೆಸರಿನಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋಗಳನ್ನು ಡಿಲೀಟ್ ಮಾಡಲು ನ್ಯಾಯಾಲಯ ಆದೇಶಿಸಿದ್ದರೂ ಮತ್ತೆ ಅಪ್ಲೋಡ್ ಮಾಡಿ, ಮಾನನಷ್ಟ ಉಂಟು ಮಾಡಲಾಗಿದೆ. ಇದರಿಂದ 10 ಕೋಟಿ ರೂ. ನಷ್ಟ ಪರಿಹಾರ ಪಾವತಿಸಲು ಎಂ.ಡಿ. ಸಮೀರ್‌ಗೆ ಆದೇಶಿಸಬೇಕು. ಮಧ್ಯಾಂತರ ಪರಿಹಾರವಾಗಿ ವಿವಾದಿತ ವೀಡಿಯೋವನ್ನು ಚಾನೆಲ್‌ನಿಂದ ತೆಗೆದುಹಾಕಲು ಆದೇಶಿಸಬೇಕು ಎಂದು ದಾವೆಯಲ್ಲಿ ಕೋರಲಾಗಿದೆ.
ವಿಚಾರಣೆ ನಡೆಸಿದ ನ್ಯಾಯಾಲಯವು ದಾವೆದಾರರಿಗೆ ಸರಿಪಡಿಸಲಾಗದ ಹಾನಿ ಉಂಟಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ತುರ್ತಾಗಿ ಮಧ್ಯಾಂತರ ಪರಿಹಾರ ಆದೇಶ ಮಾಡುವ ಅಗತ್ಯವಿದೆ ಎಂದು ತೀರ್ಮಾನಿಸಿ, ವೀಡಿಯೋ ತೆಗೆದುಹಾಕಲು ಸಮೀರ್‌ಗೆ ಸೂಚನೆ ನೀಡಿದೆ.