ಬೆಂಗಳೂರು: ಅನಗತ್ಯವಾಗಿ ಸುಳ್ಳು ಆರೋಪ ಮಾಡಿ ನಮ್ಮ ಕುಟುಂಬವನ್ನು ಎಳೆದುತರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಸನದ ಸಂಸದ ಶ್ರೇಯಸ್ ಪಟೇಲ್ ಎಚ್ಚರಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಹೈಕೋರ್ಟ್‌ನಿಂದ ಯಾವುದೇ ನೋಟೀಸ್ ಬಂದಿಲ್ಲ. ಬಿಜೆಪಿಯ ಮುಖಂಡ ದೇವರಾಜೇಗೌಡ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಒಬ್ಬ ಮನುಷ್ಯನಿಗೆ ಎಷ್ಟು ಕಿರುಕುಳ ನೀಡಲು ಸಾಧ್ಯ? ಉದ್ದೇಶಪೂರ್ವಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನವೇ ನಾನಾ ರೀತಿಯ ಆರೋಪಗಳನ್ನು ಮಾಡಿದರು. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳು ಕಂಡುಬರುತ್ತಿದ್ದಂತೆ ಮತ್ತಷ್ಟು ಟೀಕೆಗಳು ಕೇಳಿಬಂದವು. ಯಾವುದೂ ಸಾಬೀತಾಗಿಲ್ಲ ಎಂದು ಹೇಳಿದರು.
ನ್ಯಾಯಾಲಯದಲ್ಲಿ ತಮಗೆ ನ್ಯಾಯ ಸಿಗಲಿದೆ. ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ನನ್ನ ಪತ್ನಿ ಹಾಗೂ ಮಕ್ಕಳಿಗೆ ಸೇರಿದ ಎಲ್ಲಾ ವಿವರಗಳನ್ನೂ ದಾಖಲಿಸಿದ್ದೇನೆ. ತಂಗಿಗೆ ನೀಡಿದ್ದ ಆಸ್ತಿಗಳ ಮಾಹಿತಿಯನ್ನು ತೋರಿಸಲು ಸಾಧ್ಯವೇ? ದುರುದ್ದೇಶಪೂರಿತವಾಗಿ ಕುಟುಂಬದ ಸದಸ್ಯರನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.