ನವದೆಹಲಿ: ಬೆಂಗಳೂರಿನಲ್ಲಿ ಮೂಲಸೌಕರ್ಯ ಒದಗಿಸುವ ಯೋಜನೆಗಳಿಗೆ ರಕ್ಷಣಾ ಇಲಾಖೆ ಹೆಚ್ಚುವರಿ ಭೂಮಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಂಗಳವಾರ ಮನವಿ ಮಾಡಿದರು.
ನವದೆಹಲಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಅವರು ಮಂಗಳವಾರ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.
ಮನವಿ ಪತ್ರದಲ್ಲಿ ಬೆಂಗಳೂರು ಐಟಿ ಸಿಟಿಯಾಗಿದ್ದು, ದೇಶಾದ್ಯಂತ ಸಾಕಷ್ಟು ಜನರು ಉದ್ಯೋಗ ಅರಸಿ ಇಲ್ಲಿಗೆ ಬರುತ್ತಾರೆ. ಇದು ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಹೀಗಾಗಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ ಉಪನಗರ ರೈಲ್ವೇ ಯೋಜನೆಗೆ ರಕ್ಷಣಾ ಇಲಾಖೆಯ ಹೆಚ್ಚುವರಿ ಭೂಮಿಯನ್ನು ಒದಗಿಸಬೇಕು.
ಈಜಿಪುರ ರಿಂಗ್ ರಸ್ತೆಯಿಂದ ಸರ್ಜಾಪುರ ಮುಖ್ಯ ರಸ್ತೆ ವರೆಗೆ ನೂತನ ರಸ್ತೆ ನಿರ್ಮಿಸಲು ರಕ್ಷಣಾ ಇಲಾಖೆಯು 17.50 ಎಕರೆ ಜಾಗ ನೀಡಬೇಕು. ಬಾಣಸವಾಡಿಯಲ್ಲಿ ಈಗಿರುವ ಆರ್‌ಒಬಿಗೆ ಹೆಚ್ಚುವರಿ ಲೂಪ್ ನಿರ್ಮಿಸಲು 796 ಚದರ ಮೀಟರ್ ಜಾಗದ ಅಗತ್ಯ ಇದೆ. ಬೈಯಪ್ಪನಹಳ್ಳಿಯಲ್ಲಿ ಆರ್‌ಒಬಿ ನಿರ್ಮಾಣಕ್ಕೆ 4454 ಚದರ ಮೀಟರ್ ಜಾಗ ಬೇಕಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್– 2ಕ್ಕೆ 0.11 ಎಕರೆ ಜಾಗದ ಅಗತ್ಯ ಇದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಬೇಕಿದೆ. ಇದಕ್ಕಾಗಿ ರಕ್ಷಣಾ ಇಲಾಖೆ ಶೀಘ್ರದಲ್ಲಿ ಜಾಗ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಹೊಸದಿಲ್ಲಿಯಲ್ಲಿನ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಉಪಸ್ಥಿತರಿದ್ದರು.