ಬೆಂಗಳೂರು: ದೇಶದ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಿ ಪಡೆದ ಪ್ರಮಾಣ ಪತ್ರಗಳು ದೇಶಾದ್ಯಂತ ಎಲ್ಲೆಡೆ ಸಿಂಧುವಾಗಿರುತ್ತವೆ ಮತ್ತು ಅದನ್ನು ದೇಶದ ಎಲ್ಲ ಸಂಸ್ಥೆಗಳು ಮಾನ್ಯ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ ಕರ್ನಾಟಕದ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಅಧ್ಯಯನ ಮಾಡಿದ್ದ ಕೇರಳ ಮೂಲದ ಇಬ್ಬರು ವಿದ್ಯಾರ್ಥಿನಿಯರನ್ನು ನೋಂದಣಿ ಮಾಡಿಕೊಳ್ಳುವಂತೆ ಕೇರಳ ದಾದಿಯರ ಮತ್ತು ಶುಶ್ರೂಷಕಿಯರ ಮಂಡಳಿ (ಕೆಎನ್‌ಎಂಸಿ)ಗೆ ನಿರ್ದೇಶನ ನೀಡಿದೆ.
ನೋಂದಣಿ ನಿರಾಕರಿಸಿದ್ದ ಮಂಡಳಿಯ ಕ್ರಮ ಪ್ರಶ್ನಿಸಿ ಮಂಗಳೂರಿನ ನ್ಯೂ ಆರ್.ಕೆ. ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ 2023ರಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಪಡೆದ ದಾನಿಯಾ ಜಾಯ್ ಮತ್ತು ನೀತು ಬೇಬಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ತಮ್ಮ ರಾಜ್ಯದಲ್ಲಿ ಪದವಿ ಪಡೆದಿಲ್ಲ ಎಂಬ ಕಾರಣಕ್ಕೆ ಮತ್ತೂಂದು ರಾಜ್ಯದಲ್ಲಿ ಬಿಎಸ್ಸಿ (ನರ್ಸಿಂಗ್)ಕೋರ್ಸ್‌ನಲ್ಲಿ ಪದವಿ ಪಡೆದವರಿಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ನೋಂದಣಿ ನಿರಾಕರಿಸುವಂತಿಲ್ಲ. ಇಂತಹದ್ದೇ ರಾಜ್ಯದಲ್ಲಿ ನರ್ಸಿಂಗ್ ವೃತ್ತಿಯನ್ನು ಅಭ್ಯಾಸ ಮಾಡುವ ಸಲುವಾಗಿ ನೋಂದಣಿಗಾಗಿ ಭಾರತೀಯ ನರ್ಸಿಂಗ್ ಕೌನ್ಸಿಲ್(ಐಎನ್‌ಸಿ) ಮಾನ್ಯತೆ ಪ್ರಮಾಣ ಪತ್ರ ಒದಗಿಸುವುದಕ್ಕೆ ರಾಜ್ಯ ನರ್ಸಿಂಗ್ ಕೌನ್ಸಿಲ್‌ಗೆ ಅವಕಾಶವಿಲ್ಲ ಎಂದೂ ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಒಬ್ಬ ವ್ಯಕ್ತಿ ಒಂದು ರಾಜ್ಯದಲ್ಲಿ ನೆಲೆಸಿ, ಮತ್ತೂಂದು ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡಿ, ಇನ್ನೊಂದು ರಾಜ್ಯದಲ್ಲಿ ಸೇವೆ ಸಲ್ಲಿಸಿ ಮಗದೊಂದು ರಾಜ್ಯದಲ್ಲಿ ನಿವೃತ್ತ ಜೀವನ ಕಳೆಯಬಹುದಾಗಿದ್ದು, ದೇಶದಲ್ಲಿ ಜಾರಿಯಲ್ಲಿರುವ ಕಾನೂನಿನಲ್ಲಿ ಇದಕ್ಕೆ ನಿರ್ಬಂಧವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.