Friday, April 18, 2025
Google search engine

HomeUncategorizedರಾಷ್ಟ್ರೀಯದೆಹಲಿ ವಿಧಾನಸಭಾ ಚುನಾವಣೆ 2025: ಮತದಾನ ಪ್ರಕ್ರಿಯೆ ಆರಂಭ

ದೆಹಲಿ ವಿಧಾನಸಭಾ ಚುನಾವಣೆ 2025: ಮತದಾನ ಪ್ರಕ್ರಿಯೆ ಆರಂಭ

ಹೊಸದಿಲ್ಲಿ: ದೆಹಲಿ ವಿಧಾನಸಭಾ ಚುನಾವಣೆ 2025ರ ಮತದಾನ ಪ್ರಕ್ರಿಯೆ ಬುಧವಾರ ಆರಂಭಗೊಂಡಿದ್ದು, ಪ್ರಧಾನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮುಂದಾಳತ್ವದ ಆಮ್​ ಆದ್ಮಿ ಪಕ್ಷದ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಹೀಗಾಗಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿಯ ಗದ್ದುಗೆ ಹಿಡಿಯಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ ಹರಸಾಹಸ ನಡೆಸಿದ್ದು, ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ. ಸತತ ಮೂರನೇ ಚುನಾವಣೆಯಲ್ಲಿ ಶೂನ್ಯ ಸಾಧನೆಯ ಅವಮಾನದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವ ಯತ್ನದಲ್ಲಿದೆ. ತ್ರಿಕೋನ ಸ್ಪರ್ಧೆಯ ಕಣದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಪ್ರಕ್ರಿಯೆ ಮುಂಜಾನೆ 7ಕ್ಕೆ ಆರಂಭವಾಗಿದೆ. ಕೇಜ್ರಿವಾಲ್, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಕದನ ಕಣವಾಗಿ ದೆಹಲಿ ಮಾರ್ಪಟ್ಟಿದ್ದು, ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಮಾಜಿ ಸಿಎಂ ಅರವಿಂದ ಕೇಜ್ರಿವಾಲ ವಿರುದ್ಧ ಬಿಜೆಪಿಯಿಂದ ಪರ್ವೇಶ್ ಶರ್ಮಾ, ಹಾಲಿ ಸಿಎಂ ಆತಿಶಿ ವಿರುದ್ಧ ಬಿಜೆಪಿಯಿಂದ ರಮೇಶ್ ಬಿದೂರಿ ಕಾಂಗ್ರೆಸ್ ನಿಂದ ಅಲ್ಕಾ ಲಂಬಾ ಕಣದಲ್ಲಿದ್ದಾರೆ. ಉಳಿದಂತೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದ್ರ ಜೈನ್, ಸೋಮನಾಥ್ ಭಾರ್ತಿ ಮೊದಲಾದವರು ಕಣದಲ್ಲಿದ್ದಾರೆ.

70 ಸದಸ್ಯಬಲದ ವಿಧಾನಸಭೆಯಲ್ಲಿ ಕನಿಷ್ಠ 55 ಸ್ಥಾನಗಳನ್ನು ತಮ್ಮ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿ ಕೇಜ್ರಿವಾಲ್ ಇದ್ದಾರೆ. 2020ರಲ್ಲಿ 62 ಹಾಗೂ 2015ರ ಚುನಾವಣೆಯಲ್ಲಿ 67 ಸ್ಥಾನಗಳನ್ನು ಎಎಪಿ ಗೆದ್ದಿತ್ತು. ಮತಗಳಿಕೆಯಲ್ಲಿ ಬಿಜೆಪಿ ಸನಿಹದಲ್ಲಿದ್ದರೂ, ಸೀಟುಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಹಿರಿಯ ನಾಗರಿಕರು ಮತ್ತು ಅಂಗವಿಕಲರು ಸುಲಭವಾಗಿ ತಮ್ಮ ಹಕ್ಕು ಚಲಾಯಿಸುವಂತೆ ಅನುಕೂಲ ಕಲ್ಪಿಸುವ ಉದ್ದೇಶದಿದ 733 ವಿಶೇಷ ಮತಗಟ್ಟೆಗಳನ್ನು ಇವರಿಗಾಗಿ ಸ್ಥಾಪಿಸಲಾಗಿದೆ. ಇದರ ಜತೆಗೆ ಮನೆಯಿಂದಲೇ ಮತದಾನ ಮಾಡಲು ಅರ್ಹರಾದ 7553 ಮಂದಿಯ ಪೂಕಿ 6980 ಮಂದಿ ಈಗಾಗಲೇ ಮತದಾನ ಮಾಡಿದ್ದಾರೆ. ಯಾವ ಮತಗಟ್ಟೆಯಲ್ಲಿ ಎಷ್ಟು ಜನದಟ್ಟಣೆ ಇದೆ ಎಂದು ಮತದಾರರು ತಿಳಿದುಕೊಳ್ಳಲು ಅನುವಾಗುವಂತೆ ಚುನಾವಣಾ ಆಯೋಗ ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಮ್ ಆ್ಯಪ್ ಪರಿಚಯಿಸಿದೆ.

ಮುಂಜಾನೆ 7ಕ್ಕೆ ಆರಂಭವಾಗಿರುವ ಮತದಾನ ಸಂಜೆ 6ರವರೆಗೆ ನಡೆಯಲಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. 220 ಅರೆಮಿಲಿಟರಿ ಪಡೆ ತುಕಡಿಗಳನ್ನು ನಿಯೋಜಿಸಲಾಗಿದ್ದು, ಇದರ ಜತೆಗೆ 35,626 ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಪಡೆದ 19 ಸಾವಿರ ಮಂದಿ ಭದ್ರತಾ ಕಾರ್ಯಗಳಿಗೆ ನಿಯೋಜಿತರಾಗಿದ್ದಾರೆ.

RELATED ARTICLES
- Advertisment -
Google search engine

Most Popular