ಪಿರಿಯಾಪಟ್ಟಣ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ವತಿಯಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದಾಗಿ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು ತಿಳಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಶಿಕ್ಷಕರಿಂದ ಕುಂದು ಕೊರತೆಗಳ ಮನವಿ ಆಲಿಸಿ ಅವರು ಮಾತನಾಡಿದರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ದೊರೆಯುವ ನೇರ ಅನುದಾನ ಹಾಗೂ ನರೇಗಾ ಯೋಜನೆಯಡಿಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಪರಿಹಾರ, ಶಾಲಾ ಕಾಂಪೌಂಡ್ ಹಾಗು ನೂತನ ಕೊಠಡಿ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಾರದರ್ಶಕವಾಗಿ ತಲುಪಿಸಿ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಲಾದ ಸಹಾಯ ಮಾಡುವ ಭರವಸೆ ನೀಡಿದರು. ಈ ವೇಳೆ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದ ಅಧ್ಯಕ್ಷ ಪಿ.ದೇವರಾಜು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಎಸ್ ಡಿಎಂಸಿ ಅಧ್ಯಕ್ಷ ಕುಮಾರ್, ಪಿಡಿಓ ದೇವರಾಜೇಗೌಡ, ಗ್ರಾಮದ ಮುಖಂಡರಾದ ನಂಜುಂಡಸ್ವಾಮಿ, ಶಶಿಧರರ್, ನಾಗಭೂಷಣಾರಾಧ್ಯ, ರುಕ್ಮಾಂಗದಾಚಾರ್, ಸೋಮಶೇಖರ್, ಬೇಟೆಗೌಡನಕೊಪ್ಪಲು ಗ್ರಾಮದ ಸೋಮೇಗೌಡ, ಮುಖ್ಯ ಶಿಕ್ಷಕರಾದ ಚನ್ನೇಗೌಡ, ಸಹಶಿಕ್ಷಕರಾದ ವಿಶುಕುಮಾರ್, ಯೋಗೇಶ್, ಕೃಷ್ಣ, ಗೌರವ ಶಿಕ್ಷಕರಾದ ರಕ್ಷಿತ್, ಚೈತ್ರ, ಅತಿಥಿ ಶಿಕ್ಷಕರಾದ ಆಶಾ ಮತ್ತು ವಿದ್ಯಾರ್ಥಿಗಳು ಇದ್ದರು.