ಬೆಂಗಳೂರು : ಫುಡ್ ಡೆಲಿವರಿ ಆಪ್‌ಗಳ ಶುಲ್ಕ ಗಗನಕ್ಕೇರಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಂಸದೆ ಸುಮಲತಾ ಅಂಬರೀಶ್ ಗೆ ಕಹಿ ಅನುಭವವಾಗಿದೆ. ತಾವು ಆರ್ಡರ್ ಮಾಡಿದ್ದ ಪೊಂಗಲ್ ದರಕ್ಕಿಂತ ಹೆಚ್ಚು ಇತರೆ ಶುಲ್ಕು ವಿಧಿಸಿದ ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದು, ಆಹಾರದ ಮೂಲ ಬೆಲೆಗೆ ಹೋಲಿಸಿದರೆ ಅತಿಯಾದ ಡೆಲಿವರಿ ಹಾಗೂ ಇತರೆ ಶುಲ್ಕಗಳನ್ನು ವಿಧಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ 115 ರೂಪಾಯಿ ಮಾತ್ರವಾಗಿದ್ದರೂ, ಸ್ವಿಗ್ಗಿ ಐಟಂ ಹಾಗೂ ಇತರೆ ಶುಲ್ಕ ಸೇರಿಸಿ ಒಟ್ಟು 273 ರೂ. ವಸೂಲಿ ಮಾಡಿದೆ. ಅಂದರೆ ಮೂಲ 115 ರೂಪಾಯಿಯ ಪೊಂಗಲ್ಗೆ 158 ರೂ. ಶುಲ್ಕ ವಿಧಿಸಲಾಗಿದ್ದು, ಇದಕ್ಕೆ ಸುಮಲತಾ ಅಂಬರೀಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಆಹಾರದ ಬೆಲೆಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಗ್ರಾಹಕರಿಗೆ ಪಾರದರ್ಶಕ ಬೆಲೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಸುಮಲತಾ ಪೋಸ್ಟ್ ಗೆ ನೆಟ್ಟಿಗರು ಕಮೆಂಟ್ಸ್ ಸುರಿಮಳೆಗೈದಿದ್ದು, ಪಾರದರ್ಶಕ ಸೇವೆ ಹಾಗೂ ಜನಸ್ನೇಹಿ ದರ ನಿಗದಿ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



