ಗುಂಡ್ಲುಪೇಟೆ: ತಾಲೂಕಿನ ಕೂತನೂರು ಗ್ರಾಪಂ ಪಿಡಿಓ ರಜೆ ಮೇಲೆ ತೆರಳಿ ಎರಡು ತಿಂಗಳು ಕಳೆದಿದೆ. ಈ ಕಾರಣದಿಂದ ಗ್ರಾಪಂ ವ್ಯಾಪ್ತಿಯಲ್ಲಿ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಉದ್ಭವಿಸಿದೆ. ಜೊತೆಗೆ ಕಾಮಗಾರಿ ಸಂಬಂಧಿತ ಅಳತೆ ಪುಸ್ತಕ(ಎಂ.ಬಿ. ಬುಕ್) ಕೇಳಿದರೆ ಉಢಾಪೆ ಉತ್ತರ ಕೊಡುತ್ತಿದ್ದಾರೆ ಎಂದು ಆರೋಪಿಸಿ ಕೂತನೂರು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ತಂಡ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸು ಅವರಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕೂತನೂರು ಗ್ರಾಪಂ ಪಿಡಿಓ ವಿಜಯಕುಮಾರ್ ದಿವಟಗಿ ಬಳಿ 15ನೇ ಹಣಕಾಸು ಯೋಜನೆಯ 2022-23ನೇ ಸಾಲಿನ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಕಾನೂನಾತ್ಮಕವಾಗಿ ಅಳತೆ ಪುಸ್ತಕದಲ್ಲಿ ಸಂಬಂಧಪಟ್ಟ ಪಂಚಾಯತ್ ರಾಜ್ ಇಂಜಿನಿಯರ್ ಕಾಮಗಾರಿಗಳನ್ನು ಪರಿಶೀಲಿಸಿ, ಸುಮಾರು 3 ರಿಂದ 4 ಲಕ್ಷ ರೂ.ಗಳ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಕಾನೂನಾತ್ಮಕವಾಗಿ ಕಳೆದ ಎರಡು ತಿಂಗಳುಗಳ ಹಿಂದೆ ನಮೂದು ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬಿಲ್ ಪಾವತಿ ಆಗಿಲ್ಲ. ಈ ಬಗ್ಗೆ ಪಿಡಿಓ ಕೇಳಿದರೆ ಎಂ.ಬಿ ಬುಕ್ ನನಗೆ ಗೊತ್ತಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಪ್ರಿಲ್ ಮೊದಲನೇ ವಾರದಲ್ಲಿ ರಜೆಯಿಂದ ತೆರಳಿದ ಪಿಡಿಓ ರಜೆ ಅವಧಿ ಮುಗಿದರೂ ಇನ್ನೂ ಸಹ ಕೆಲಸಕ್ಕೆ ಹಾಜರಾಗದೆ, ಗ್ರಾಮದಲ್ಲಿ ಕುಡಿಯುವ ನೀರು, ಬೀದಿ ದೀಪಗಳ ಸಮಸ್ಯೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ. ಆದ್ದರಿಂದ ಕಾಮಗಾರಿ ಕೈಗೊಳ್ಳಲು ಎಂ.ಬಿ ಬುಕ್ ಅವಶ್ಯಕತೆಯಿರುವುದರಿಂದ ಈ ಬಗ್ಗೆ ಕ್ರಮ ವಹಿಸುವಂತೆ ಗ್ರಾಪಂ ಅಧ್ಯಕ್ಷರಾದ ಮಲ್ಲಾಜಮ್ಮ, ಉಫಾಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ಗೋಪಾಲ್, ರಾಜೇಗೌಡ, ರಮೇಶ್, ಸಿದ್ದರಾಜು, ಮಾದಶೆಟ್ಟಿ, ಲಕ್ಷ್ಮಮ್ಮ, ಮಹದೇವಮ್ಮ, ಚಿಕ್ಕತಾಯಮ್ಮ, ರಾಜೇಶ್ವರಿ ಒತ್ತಾಯಿಸಿದ್ದಾರೆ.