ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಕಾನೂನಾತ್ಮಕ ನಾಡಧ್ವಜ ನೀಡಬೇಕು. ನ.೧ರಂದು ಆ ಧ್ವಜ ಹಾರಬೇಕು ಎಂದು ಬೆಳಗಾವಿಯ ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಮತ್ತು ಹೈಕೋರ್ಟ್ ವಕೀಲ ಉಮಾಪತಿ ಎಸ್. ಆಗ್ರಹಿಸಿದರು.
`ಕಾನೂನಾತ್ಮಕ ನಾಡಧ್ವಜಕ್ಕಾಗಿ ಪಾಟೀಲ ಪುಟ್ಟಪ್ಪ ಹಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಭೀಮಪ್ಪ ಗಡಾದ ಹೋರಾಟ ಮುಂದುವರಿಸಿದ್ದರು. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಒಂಬತ್ತು ಮಂದಿ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ನೀಡಿದ ವರದಿಯ ಆಧಾರದಲ್ಲಿ ಸಚಿವ ಸಂಪುಟ ಒಪ್ಪಿಗೆ ಸೂಚಿಸಿತ್ತು. ಆನಂತರ ೨೦೧೮ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜ ಅನಾವರಣಗೊಳಿಸಿದ್ದರು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲ್ಲಿಂದ ಮುಂದೆ ಯಾವುದೇ ಬೆಳವಣಿಗೆಯಾಗಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಾಗ ಸರ್ಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕೇ ಹೊರತು ಹೈಕೋರ್ಟ್ ಅಲ್ಲ ಎಂದು ನ್ಯಾಯಾಲಯ ಹೇಳಿತ್ತು. ರಾಜ್ಯಕ್ಕೆ ಶಾಸನಬದ್ಧವಾದ ಧ್ವಜವನ್ನು ಘೋಷಿಸಬೇಕು. ನ.೧ರಂದು ಹಾರಿಸಬೇಕು. ಇಲ್ಲದೇ ಇದ್ದರೆ ಕನ್ನಡ ದ್ರೋಹಿ ಸರ್ಕಾರ ಎಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕೀಲರಾದ ಸುಧಾ ಕಾಟ್ವ, ಹೋರಾಟಗಾರ ನರಸಿಂಹಮೂರ್ತಿ ಉಪಸ್ಥಿತರಿದ್ದರು.