ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಳೆ ಎಣ್ಣೆಗೆ ಭಾರೀ ಬೇಡಿಕೆ ಇದ್ದು, ರೈತರು ತಾಳೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಆಸಕ್ತ ರೈತರು ಇದರ ಸದುಪಯೋಗ ಪಡೆಯ ಬೇಕು ಎಂದು ಸಾಲಿಗ್ರಾಮ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಹೆಬ್ಬಾಳು ರಾಘವೇಂದ್ರ ಹೇಳಿದರು.
ಸಾಲಿಗ್ರಾಮ ಹೋಬಳಿಯ ವಿವಿಧ ಗ್ರಾಮಗಳಲ್ಲಿ ತಾಳೆ ಬೆಳೆ ಬೆಳೆಯುವ ಬಗ್ಗೆ ಹಾಗೂ ತಂಬಾಕಿಗೆ ಪರ್ಯಾಯ ಬೆಳೆ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಹಿರಿಯ ತೋಟಗಾರಿಕೆ ನಿರ್ದೇಶಕಿ ಭಾರತಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌಷ್ಟಿಕಾಂಶದ ದೃಷ್ಟಿಯಿಂದಲೂ ತಾಳೆ ಎಣ್ಣೆಯು ವಿಟಮಿನ್ ಎ ಮತ್ತು ಇ ಸತ್ವವನ್ನು ಹೇರಳವಾಗಿ ಹೊಂದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳುತಾಳೆ ಬೇಸಾಯವನ್ನು ಪ್ರೋತ್ಸಾಹಿಸುತ್ತಿವೆ. ಇಂದು ಈ ಬೆಳೆಯು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮುತ್ತಿದೆ ಎಂದರು.
ತಾಳೆ ಬೆಳೆಗಾರರಿಗೆ ಇಲಾಖೆಯಿಂದ ಹಲವು ಸೌಲಭ್ಯಗಳು ದೊರೆಯುತ್ತಿದ್ದು, ತಾಳೆ ಬೆಳೆಯ ವಿಸ್ತರಣೆಕಾರ್ಯಕ್ರಮದಡಿ ತಾಳೆ ಸಸಿಗಳ ಪ್ರದೇಶ ವಿಸ್ತರಣೆ ಕೈಗೊಂಡರೆ ಸಹಾಯಧನ ದೊರೆಯಲಿದೆ. ಈಗಾಗಲೇ ಅಭಿವೃದ್ಧಿಪಡಿಸಿರುವ ತಾಳೆ ತೋಟಗಳಿಗೆ ಪ್ರತಿ ಹೆಕ್ಟೇರ್‌ಗೆ 10,500 ರೂ. ಸಹಾಯಧನವನ್ನು ರಾಸಾಯನಿಕ ಹಾಗೂ ಸಾವಯವ ಗೊಬ್ಬರದ ರೂಪ ದಲ್ಲಿ ಸರ್ಕಾರಿ ಅನುಮೋದಿತ ಖಾಸಗಿ ಪಾಲುದಾರ ಸಂಸ್ಥೆಯವರ ಸಹಯೋಗ ದಲ್ಲಿ ವಿತರಿಸಲಾಗುವುದು ಎಂದರು.
ತಂಬಾಕಿನ ಬದಲು ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ರೈತರು ಚಿಂತನೆ ನಡೆಸಬೇಕು. ತಂಬಾಕು ಬದಲು ಶುಂಠಿ, ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಚೆಂಡು ಹೂ, ಬಾಳೆ ಬೆಳೆಯುವಂತೆ ತಂಬಾಕು ರೈತರಿಗೆ ಅರಿವು ಮೂಡಿಸಿ, ಹಳ್ಳಿಗಳಲ್ಲಿ ಈ ಬಗ್ಗೆ ಜಾಥಾ ಮಾಡಿ ಕರಪತ್ರ ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊರ ತಂದಿರುವ ತಾಳೆ ಬೆಳೆ ಪ್ರೋತ್ಸಾಹಿಸುವ ಕುರಿತ ಕರಪತ್ರಗ ಇನ್ನು ಗ್ರಾಪಂ ಅಧ್ಯಕ್ಷ ಬಿ.ಕೆ.ಮಂಜಪ್ಪ ಬಿಡುಗಡೆಮಾಡಿದರು. ಅರ್ಜಿಯೊಂದಿಗೆ ರೈತರು ಜಾಬ್ ಕಾರ್ಡ್, ಪಹಣಿ ( ಆರ್. ಟಿ.ಸಿ.), ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಸಣ್ಣಪ್ಪ , ಲಕ್ಷ್ಮಿಪುರ ಗ್ರಾ.ಪಂ.ಅಧ್ಯಕ್ಷೆ ಮಣಿ ಮಂಜುನಾಥ್,
ಕರ್ಪೂರವಳ್ಳಿ ಗ್ರಾ.ಪಂ.ಅಧ್ಯಕ್ಷ ಪ್ರೇಮಸ್ವಾಮಿ, ಸದಸ್ಯರಾದ ಸುಜಾತ ಕೃಷ್ಣೇಗೌಡ, ಎಂ.ಪಿ.ಮಂಜುನಾಥ್, ಮುಖಂಡರಾದ ರಾಂಪುರ ಲೋಕೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.