Friday, April 18, 2025
Google search engine

HomeUncategorizedಶೈಕ್ಷಣಿಕ ಅವಧಿಯ ವೇಳಾಪಟ್ಟಿ ಪರಿಷ್ಕರಣೆಗೆ ಒತ್ತಾಯ

ಶೈಕ್ಷಣಿಕ ಅವಧಿಯ ವೇಳಾಪಟ್ಟಿ ಪರಿಷ್ಕರಣೆಗೆ ಒತ್ತಾಯ

ಮೈಸೂರು: ಮೈಸೂರು ವಿಶ್ವವಿದ್ಯಾಲಯ ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಮುಗಿಯುವವರೆಗೂ ಶೈಕ್ಷಣಿಕ ಅವಧಿ ಎಂದು ಪರಿಷ್ಕೃತ ವೇಳಾಪಟ್ಟಿ ಸುತ್ತೋಲೆ ಹೊರಡಿಸಬೇಕು. ಅಲ್ಲಿಯವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ಅತಿಥಿ ಉಪನ್ಯಾಸಕರು ಭಾಗವಹಿಸುವುದಿಲ್ಲ ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಕ್ರಾರ್ಫರ್ಡ್ ಭವನದ ಮುಂಭಾಗದ ಬಳಿ ಪ್ರತಿಭಟನೆ ನಡೆಸಲಾಯಿತು.

ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ವೇಳಾಪಟ್ಟಿಯ ಸುತ್ತೋಲೆಗಳ ವ್ಯತ್ಯಾಸದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ೨೦೨೨-೨೩ನೇ ಶೈಕ್ಷಣಿಕ ಸಾಲಿನ ಈವನ್ ಸೆಮಿಸ್ಟರ್ ವೇಳಾಪಟ್ಟಿಯಂತೆ ಸ್ನಾತಕ ಪದವಿಗೆ ಬೋಧನ ತರಗತಿಗಳು ಜು.೨೮ಕ್ಕೆ ಮುಕ್ತಾಯವಾಗುತ್ತವೆ. ಇದರಿಂದ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಕಾಲೇಜು ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ), ಅತಿಥಿ ಉಪನ್ಯಾಸಕರ ಗೌರವಧನವನ್ನು ಅಂದಿಗೇ ಕೊನೆಗೊಳಿಸಿ ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಪರೀಕ್ಷಾ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ. ಇದರಿಂದ ಮೈಸೂರು ವಿವಿ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯ ಸುತ್ತೋಲೆಯನ್ನು ಅತೀ ಶೀಘ್ರದಲ್ಲಿ ಹೊರಡಿಸಬೇಕೆಂದು ಈಗಾಗಲೇ ಮನವಿ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿ ಕಾರಿದರು.

ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡುವವರೆಗೆ ಅತಿಥಿ ಉಪನ್ಯಾಸಕರು ಎಲ್ಲಾ ಸ್ನಾತಕ ವಿಭಾಗಗಳಲ್ಲಿ ಮೌಲ್ಯಮಾಪನ ಕಾರ್ಯಗಳಿಗೆ ಭಾಗಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೇಡಿಕೆಗಳು: ಸ್ನಾತಕ ಮತ್ತು ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿಯನ್ನು ಮೌಲ್ಯಮಾಪನ ಕಾರ್ಯಗಳು ಮುಗಿಯುವವರೆಗೂ ಶೈಕ್ಷಣಿಕ ಅವಧಿ ಎಂದು ಅತೀ ಜರೂರು ಸುತ್ತೋಲೆ ಹೊರಡಿಸಬೇಕು. ಜೂ.೧೭ರಂತೆ ಮೈಸೂರು ವಿಶ್ವವಿದ್ಯಾನಿಲಯ, ಪಾವತಿಸುತ್ತಿರುವ ಪರೀಕ್ಷಾ ಸಂಭಾವನೆಯನ್ನು ಸ್ಥಗಿತಗೊಳಿಸಿರುವ ಸುತ್ತೋಲೆಯನ್ನು ತುರ್ತಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹನುಮಂತೇಶ್, ಉಪಾಧ್ಯಕ್ಷ ಮಹೇಶ್, ರಾಜ್ಯ ಉಪಾಧ್ಯಕ್ಷ ಡಾ.ದಿವಾಕರ, ಮಲ್ಲಿಕಾರ್ಜುನಸ್ವಾಮಿ, ಯತೀಶ್ ಕಬ್ಬಾಳು, ವಸಂತಕುಮಾರ್.ಕೆ.ಹೆಚ್, ಗುರುರಾಜು, ಡಾ.ಜಿ.ಶಾಮಲ, ಮಾನಸ.ಎಂ.ಎಸ್, ಹರ್ಷಿತಾ.ಎಸ್, ಚಂದ್ರಶೇಖರ, ಬಿ.ಎಸ್.ನಾಗರಾಜ್, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular