ಮೈಸೂರು: ಎಸ್‌ಸಿಎಸ್‌ಪಿ, ಟಿಎಸ್‌ಪಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ವತಿಯಿಂದ ಜಿಲ್ಲಾಧಿಕಾರ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಗಾಗಿ ಮೀಸಲಿಟ್ಟಿರುವ ಹಣದಲ್ಲಿ ೧೧,೦೦೦ ಕೋಟಿ ರೂ.ವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲು ತೀರ್ಮಾನಿಸಿರುವುದನ್ನು ಈ ಕೂಡಲೇ ಕೈಬಿಡಬೇಕು. ಕಳೆದ ಜುಲೈನಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಗಾಗಿ ೩೪,೨೦೩.೬೯ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆ ಕಾಯ್ದೆ ೨೦೧೩ರ ಭಾಗ ೭(ಡಿ) ಮೂಲಕ ಯೋಜನೆಗಾಗಿ ಮೀಸಲಿಟ್ಟಿರುವ ಹಣಕಾಸನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸುವ ದುರುದ್ದೇಶದಿಂದ ಮಾಡಿರುವ ತಿದ್ದುಪಡಿಯನ್ನು ರದ್ದುಗೊಳಿಸಿರುವುದು ಸಾಗತಾರ್ಹ. ಹಿಂದಿನ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿಗಳ ಉಪಯೋಜನೆಗಾಗಿ ಮೀಸಲಿಟ್ಟ ಹಣವನ್ನು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ದಲಿತ-ಆದಿವಾಸಿ-ಬುಡಕಟ್ಟು ವಿರೋಧಿ ನೀತಿ ಅನುಸರಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಬಿಜೆಪಿಯಂತೆ ದಲಿತ ದೋರಣೆ ಅನುಸರಿಸದೆ, ಈ ಕೂಡಲೇ ಸರ್ಕಾರದ ಪರಿಶಿಷ್ಟ ಜಾತಿ, ಪಂಗಡ ಉಪಯೋಜನೆಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲು ತೀರ್ಮಾನಿಸಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಹದೇವ ಎಸ್.ಕಲ್ಲಹಳ್ಳಿ, ತಾಲೂಕು ಸಂಚಾಲಕ ರಾಜು, ಎನ್‌ಆರ್ ಕ್ಷೇತ್ರದ ಸಂಚಾಲಕ ಜೆ.ಶಿವಣ್ಣ, ಮೈಸೂರು ತಾಲೂಕು ಸಂಚಾಲಕ ಹರೀಶ್, ನಂಜನಗೂಡು ತಾಲೂಕು ಸಂಚಾಲಕ ನಂಜನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.