ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೃಷಿ ಪತ್ತಿನ ಸಹಕಾರ ಸಂಘಗಳಿoದ ರೈತರು ಮಧ್ಯಮಾವಧಿ ಮತ್ತು ದೀರ್ಘಾವದಿ ಸಾಲ ಪಡೆದಿರುವ ಸುಸ್ತಿದಾರರ ಮೇಲೆ ದಾವೆ ಹೂಡಲು ಸಹಕಾರ ಇಲಾಖೆ ಮುಂದಾಗಿದ್ದು ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಮೂರ್ತಿ(ಕೋಳಿಕಿಟ್ಟಿ) ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರೈತರು ಸಾಲ ಮರು ಪಾವತಿಸಲು ವಿಫಲರಾಗಿ ಸುಸ್ತಿಯಾಗಿದ್ದರೆ ಅಂತವರಿಗೆ ಸಾಲ ಪಾವತಿಸಲು ತಿಳುವಳಿಕೆ ನೋಟೀಸ್ ನೀಡಿ ಆನಂತರ ದಾವೆ ಹೂಡಬೇಕೆಂದು ಸರ್ಕಾರ ಆದೇಶಿಸಿರುವುದು ಸರಿಯಲ್ಲ ಇದರಿಂದ ಗ್ರಾಮಾಂತರ ಪ್ರದೇಶದ ಬಡ ರೈತರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರೈತರು ಭತ್ತ ಕಟಾವು ಕಾರ್ಯದಲ್ಲಿ ತೊಡಗಿದ್ದು ಅವರಿಗೆ ಈಗ ಒಕ್ಕಣೆ ಮಾಡಲು ಹಣ ಖರ್ಚಾಗಲಿದ್ದು ಈ ಸಂಧರ್ಭದಲ್ಲಿ ಸಾಲ ವಸೂಲಾತಿ ಮಾಡಲು ಮುಂದಾಗಿ ನೋಟೀಸ್ ನೀಡುವುದರ ಜತೆಗೆ ದಾವೆ ಹೂಡುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇದನ್ನು ಸರ್ಕಾರ ಅರಿತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.
ಈಗಾಗಲೇ ತಂಬಾಕು ಬೆಳೆ ಬೆಳೆದಿರುವ ರೈತರು ನ್ಯಾಯಯುತ ಬೆಲೆ ಸಿಗದೆ ಕಂಗಾಲಾಗಿದ್ದು ಸರ್ಕಾರದ ಸಾಲ ವಸೂಲಾತಿಯ ಬವಣೆಯಲ್ಲಿ ಸಿಲುಕಿದರೆ ಸಹಕಾರ ಇಲಾಖೆ ದಾವೆ ಹೂಡುವ ನಿರ್ಧಾರದಿಂದ ಮತ್ತಷ್ಟು
ಸಂಕಷ್ಟಕ್ಕೀಡಾಗಲಿದ್ದು ಇದನ್ನು ಮನಗಂಡು ಮುಖ್ಯಮoತ್ರಿಗಳು ಮತ್ತು ಸಹಕಾರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ಸುಸ್ತಿದಾರರ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಭತ್ತದ ಕಟಾವು ಮುಗಿದ ನಂತರ ವಸೂಲಾತಿ ಮಾಡುವುದರೊಂದಿಗೆ ಅವರಿಗೆ ಅನುಕೂಲ ಕಲ್ಪಿಸಲು ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆoದು ಕೋರಿರುವ ಅಧ್ಯಕ್ಷರು ಈ ವಿಚಾರವಾಗಿ ಕ್ಷೇತ್ರದ ಶಾಸಕ
ಡಿ.ರವಿಶಂಕರ್ ಸೇರಿದಂತೆ ರೈತ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಿ ರೈತರ ನೆರವರಿಗೆ ಬರಬೇಕೆಂದು ಕೋರಿಕೊಂಡಿದ್ದಾರೆ.
ಈ ವಿಚಾರವಾಗಿ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಮತ್ತು ಎಂಸಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.
ಬ್ಯಾಂಕಿನ ನಿರ್ದೇಶಕರಾದ ವಿವೇಕಾನಂದ, ಹೆಚ್.ಎನ್.ರಮೇಶ್, ಹೆಚ್.ಬಿ.ನವೀನ್‌ಕುಮಾರ್, ಪಾರ್ಥಯ್ಯ, ಎಸ್.ಆರ್.ಹುಚ್ಚೇಗೌಡ, ಸಿ.ಎಂ.ರಾಜೇಗೌಡ ಈ ಸಂದರ್ಭದಲ್ಲಿ ಇದ್ದರು.