ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ದಂತಶಸ್ತ್ರ ವಿಭಾಗದಲ್ಲಿ ನಾಳೆ ಜ.21ರಂದು ದಂತ ಪಂಕ್ತಿ ಶಿಬಿರವನ್ನು ಆಯೋಜಿಸಲಾಗಿದೆ.
ದಂತಪಂಕ್ತಿ ಅಗತ್ಯವಿರುವ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರನ್ನು ದಂತಭಾಗ್ಯ ಯೋಜನೆಯಡಿ ಮೈಸೂರಿನ ಜೆ.ಎಸ್.ಎಸ್ ದಂತ ಕಾಲೇಜಿಗೆ ಕಳುಹಿಸಿಕೊಡಲಾಗುತ್ತಿತ್ತು. ಹಲವು ರೋಗಿಗಳು ಬಡವರಾಗಿದ್ದು ಹಾಗೂ ವಯಸ್ಸಾದ ಕಾರಣ ಮೈಸೂರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆಕ್ಸ್‍ಪರ್ಡ್ ದಂತ ಕಾಲೇಜಿನ ದಂತ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಚಾಮರಾಜನಗರ ವೈದ್ಯಕೀಯ ಸಂಸ್ಥೆಗೆ ಬಂದು ಎರಡು ತಿಂಗಳಿಗೊಮ್ಮೆ ದಂತ ಪಂಕ್ತಿಗಳನ್ನು ತಯಾರಿಸಿ ಅಳವಡಿಸಲು ಒಪ್ಪಿಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ದಂತ ಶಸ್ತ್ರ ವಿಭಾಗದಲ್ಲಿಯೇ ದಂತ ಪಂಕ್ತಿ ಶಿಬಿರವನ್ನು ನಾಳೆ ಜ. 21 ರಂದು ಏರ್ಪಡಿಸಲಾಗಿದೆ. ಶಿಬಿರದ ಯಶಸ್ವಿ ಆಯೋಜನೆಗೆ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಅವರು ಸಹಕಾರ ನೀಡಿದ್ದಾರೆ.
ದಂತ ಪಂಕ್ತಿ ಶಿಬಿರದ ಸದುಪಯೋಗ ಮಾಡಿಕೊಳ್ಳುವಂತೆ ದಂತ ವಿಭಾಗದ ಮುಖ್ಯಸ್ಥರಾದ ಡಾ. ಗಾಯಿತ್ರಿ ರಮೇಶ್ ಹಾಗೂ ಎನ್.ಓ.ಹೆಚ್.ಪಿ ನೋಡಲ್ ಅಧಿಕಾರಿಯಾದ ಡಾ. ಪ್ರಿಯದರ್ಶಿನಿ. ಸಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.