Saturday, April 19, 2025
Google search engine

Homeರಾಜ್ಯಕೃಷಿ ಇಲಾಖೆ: ಭತ್ತದಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಕ್ರಮಗಳು

ಕೃಷಿ ಇಲಾಖೆ: ಭತ್ತದಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಕ್ರಮಗಳು

ಬಳ್ಳಾರಿ:ಜಿಲ್ಲೆಯ ಪ್ರಮುಖ ಆಹಾರ ಧಾನ್ಯ ಬೆಳೆ ಭತ್ತವನ್ನು ಸುಮಾರು 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಪ್ರಸ್ತುತ ನಾಟಿ ಕಾರ್ಯ ಪ್ರಗತಿಯಲ್ಲಿರುತ್ತದೆ. ಅಧಿಕ ಇಳುವರಿ ಪಡೆಯಲು ವಿವಿಧ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಎಂದು ಉಪ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಭತ್ತದ ನಾಟಿಗೆ 3 ವಾರ ಮುಂಚೆ ಎಕರೆಗೆ 3 ರಿಂದ 4 ಟನ್ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್/ 1 ಟನ್ ಕೋಳಿ ಗೊಬ್ಬರ ಮಣ್ಣಿಗೆ ಸೇರಿಸುವುದು ಅಥವಾ ನಾಟಿ ಮಾಡುವ 3 ವಾರ ಮೊದಲು ಎಕರೆಗೆ 4 ಟನ್ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದು. ಬಸಿಗಾಲುವೆ ಮೂಲಕ ಹೆಚ್ಚಿನ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಆದಷ್ಟು ಜಮೀನುಗಳನ್ನು ಸಮತಟ್ಟು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ನಾಟಿ ಮಾಡುವಾಗ ಲಭ್ಯವಿದ್ದಲ್ಲಿ ಅಂತರ ಕಾಪಾಡಬೇಕು. ಸಾಲಿನಿಂದ ಸಾಲಿಗೆ 20 ಸೆಂ.ಮೀ. ಹಾಗೂ ಸಸಿಯಿಂದ ಸಸಿಗೆ 10 ಸೆಂಟೀಮೀಟರ್ ಅಂತರ ಇರುವಂತೆ ನೋಡಿಕೊಳ್ಳಬೇಕು. ದೀರ್ಘಾವಧಿ ಸಸಿಗಳ ಸಂಖ್ಯೆ ಕಾಪಾಡಲು ಪ್ರತಿ ಚದರ ಮೀಟರ್‍ಗೆ 50 ಗುಣಿ, ಅಲ್ಪಾವಧಿ/ಮಧ್ಯಮಾವಧಿ ತಳಿಗಳಾದಲ್ಲಿ 67 ಗುಣಿ ಬರುವಂತೆ ನೋಡಿಕೊಳ್ಳಬೇಕು.

20 ರಿಂದ 25 ದಿನಗಳ ಪ್ರಾಯದ ಸಸಿಗಳನ್ನು ಬಳಸಬೇಕು. ದೀರ್ಘಾವಧಿ ಬೆಳೆಗಳಿಗೆ 30 ರಿಂದ 35 ದಿನಗಳ ಪ್ರಾಯದ ಸಸಿಗಳನ್ನು ಬಳಸಬೇಕು. ಪ್ರತಿ ಗುಣಿಗೆ 2 ರಿಂದ 3 ಸಸಿಗಳನ್ನು ನಾಟಿ ಮಾಡಬೇಕು. ಅನಿವಾರ್ಯ ಕಾರಣಗಳಿಂದ ವಯಸ್ಸಾದ ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ 2 ರಿಂದ 3 ಸಸಿಗಳ ಬದಲು 4 ರಿಂದ 5 ಸಸಿಗಳನ್ನು ನೆಡಬೇಕು. 5 ಸೆಂಟೀಮೀಟರ್ ಆಳ ನಾಟಿ ಮಾಡಬಾರದು.
ನಾಟಿ ಮಾಡುವ ಪೂರ್ವದಲ್ಲಿ ಭತ್ತದ ಸಸಿಯ ಬೇರುಗಳನ್ನು ಅಜೋಸ್ಪೈರುಲಂ ಅಣುಜೀವಿ ಗೊಬ್ಬರದ ದ್ರಾವಣ (Slurry) ದಲ್ಲಿ 15 ರಿಂದ 20 ನಿಮಿಷ ಅದ್ದಿ ನಾಟಿ ಮಾಡುವುದರಿಂದ ಸಾರಜನಕದ ಬಳಕೆ ಶೇ.25 ರಷ್ಟು ಕಡಿಮೆ ಮಾಡಬಹುದು.
ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ಪ್ರತಿ ಎಕರೆಗೆ 60:30:30:8 (ಸಾರಜನಕ:ರಂಜಕ:ಪೊಟ್ಯಾಷ್:ಸತು) ಶಿಫಾರಸ್ಸು ಇದ್ದು, ಇದರಲ್ಲಿ ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್ ಹಾಗೂ ಶೇ.50 ರಷ್ಟು ಸಾರಜನಕ ಗೊಬ್ಬರಗಳನ್ನು ತಳಗೊಬ್ಬರವಾಗಿ ನೀಡಬೇಕು, ಉಳಿಕೆ ಶೇ.50 ರಷ್ಟು ಸಾರಜನಕ ಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ನ್ಯಾನೋ ಯೋರಿಯಾ ಹಾಗೂ ನ್ಯಾನೋ ಡಿ.ಎ.ಪಿ. ದ್ರಾವಣಗಳನ್ನು ಸಹ ಬಳಸಬಹುದಾಗಿದೆ. ಇವುಗಳ ಸಮರ್ಪಕ ಪೂರೈಕೆಗಾಗಿ ನಾಟಿ ಸಮಯದಲ್ಲಿ ಪ್ರತಿ ಎಕರೆಗೆ 2 ಬ್ಯಾಗ್ 20:20:0:13 + 25 ಕೆ.ಜಿ ಯೂರಿಯಾ ಅಥವಾ ಪ್ರತಿ ಎಕರೆಗೆ 2 ಬ್ಯಾಗ್ 10:26:26+1 ಬ್ಯಾಗ್ ಯೂರಿಯಾ ಅಥವಾ ಪ್ರತಿ ಎಕರೆಗೆ 1 ಬ್ಯಾಗ್ ಡಿಎಪಿ+1 ಬ್ಯಾಗ್ 10:26:26 + 1 ಬ್ಯಾಗ್ ಯೂರಿಯಾ ಬಳಸಬೇಕಾಗುತ್ತದೆ. ಗೊಬ್ಬರ ಹಾಕಿದ ನಂತರ ಮಡಿಯಿಂದ ಮಡಿಗೆ ನೀರು ಹರಿದು ಹೋಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ತಾಂತ್ರಿಕ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES
- Advertisment -
Google search engine

Most Popular