ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಇಂದು ತಮ್ಮ ಸರ್ಕಾರವು ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ಸಹಾಯವನ್ನು ನೀಡುವ ಭರವಸೆಯನ್ನು ಈಡೇರಿಸುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಮಾಸಿಕ ಬೆಂಬಲದ ಮೊದಲ ಕಂತನ್ನು ಮಾರ್ಚ್ 8ರೊಳಗೆ ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಚುನಾವಣೆಗೂ ಮುನ್ನ ಬಿಜೆಪಿಯ ಪ್ರಣಾಳಿಕೆಯು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಮಾಸಿಕ 2,100 ರೂ. ಬೆಂಬಲ ನೀಡುವ ಘೋಷಣೆಯನ್ನು ಮೀರಿಸುವ ಗುರಿಯನ್ನು ಹೊಂದಿತ್ತು.
ಮಾಸಿಕ ಬೆಂಬಲದ ಮೊದಲ ಕಂತನ್ನು ಮಾರ್ಚ್ 8 ರೊಳಗೆ ಅರ್ಹ ಮಹಿಳಾ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ರೇಖಾ ಗುಪ್ತಾ ಘೋಷಿಸಿದ್ದಾರೆ. ಈ ವೇಳೆ ಹಿಂದಿನ ಎಎಪಿ ಸರ್ಕಾರವನ್ನು ಟೀಕಿಸಿದ ರೇಖಾ ಗುಪ್ತಾ, “ಪ್ರತಿ ಪೈಸೆಗೂ ಅವರು ಜನರಿಗೆ ಲೆಕ್ಕ ನೀಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ರೇಖಾ ಗುಪ್ತಾ, ತಮ್ಮ ಭರವಸೆಗಳನ್ನು ಈಡೇರಿಸುವುದು ತಮ್ಮ ಪ್ರಮುಖ ಆದ್ಯತೆ ಎಂದು ಒತ್ತಿ ಹೇಳಿದರು. “ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಈಡೇರಿಸುವುದು ರಾಜಧಾನಿಯಲ್ಲಿರುವ ಎಲ್ಲಾ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ನಮ್ಮ ಎಲ್ಲಾ ಭರವಸೆಗಳನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. ಮಾರ್ಚ್ 8ರೊಳಗೆ ಮಹಿಳೆಯರಿಗೆ ಶೇ. 100ರಷ್ಟು ಹಣಕಾಸಿನ ನೆರವು ಅವರ ಖಾತೆಗಳಿಗೆ ಸೇರುತ್ತದೆ” ಎಂದು ಹೇಳಿದ್ದಾರೆ.
ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತು. 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಬಿಜೆಪಿ ಗೆದ್ದಿತು ಮತ್ತು ಎಎಪಿಯ ದಶಕದ ಆಡಳಿತವನ್ನು ಕೊನೆಗೊಳಿಸಿತು.