ಕೆ.ಆರ್.ಪೇಟೆ : ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ವಿವಿಧ ಶಾಖೆಗಳಿಗೆ ಆಗಮಿಸಿ ಕಚೇರಿ ಕಾರ್ಯ ನಿರ್ವಹಣೆ, ಕಡತ ವಿಲೇವಾರಿ, ಸಾರ್ವಜನಿಕ ಸೇವೆ, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.
ಈ ವೇಳೆ ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ ಡಿಸಿ, ಇ-ಆಫೀಸ್ ವ್ಯವಸ್ಥೆಯಲ್ಲಿನ ಬಾಕಿ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಡಿಜಿಟಲ್ ಕಾರ್ಯವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.
ಅಲ್ಲದೆ ಆದಾಯ, ಜಾತಿ, ಭೂ ಹಿಡುವಳಿ, ವಂಶವೃಕ್ಷ, ನಿವಾಸ ಪ್ರಮಾಣಪತ್ರ ಸೇರಿದಂತೆ ಎಲ್ಲಾ ಸೇವೆಗಳನ್ನು ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿಯೇ ಒದಗಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ವಿಳಂಬ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಅಭಿಲೇಖಾಲಯ ಶಾಖೆ ದಾಖಲೆ ನಿರ್ವಹಣೆ ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡಿ, ಸರ್ಕಾರಕ್ಕೆ ನಿಗದಿತ ಶುಲ್ಕ ವನ್ನು ಕಡ್ಡಾಯವಾಗಿ ವಸೂಲಿಸಿ ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸುವಂತೆ ಸೂಚಿಸಿದರಲ್ಲದೆ ಹೋಬಳಿ ಮಟ್ಟದ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿಯೇ ಲಭ್ಯವಿದ್ದು, ಸಾರ್ವಜನಿಕರ ಮನವಿಗಳಿಗೆ ತ್ವರಿತ ಸ್ಪಂದನೆ ನೀಡಬೇಕು, ಕಚೇರಿ ಶಿಸ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ನಂತರ ಇಂದಿರಾ ಕ್ಯಾಂಟೀನ್ ಅನಿರೀಕ್ಷಿತವಾಗಿ ಆಗಮಿಸಿ ಪರಿಶೀಲನೆ ಮಾಡಿ ಕ್ಯಾಂಟೀನ್‍ನ ಸ್ವಚ್ಛತೆ, ಆರೋಗ್ಯ ಹಾಗೂ ಆಹಾರ ಸುರಕ್ಷತಾ ಮಾನದಂಡಗಳ ಅನುಷ್ಠಾನವನ್ನು ಪರಿಶೀಲಿಸಿದರು. ಆಹಾರದ ಗುಣಮಟ್ಟ, ಪ್ರಮಾಣ ಹಾಗೂ ವಿತರಣೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಸರ್ಕಾರದ ನಿಗದಿತ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಪರಿಶೀಲಿಸಿದರು.
ಬಳಿಕ ಪುರಸಭೆ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ತಾಂತ್ರಿಕ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಿದರು. ಕಸದ ಸಂಗ್ರಹಣೆ, ಮೂಲದಲ್ಲಿಯೇ ಕಸವಿಂಗಡಣೆ, ಸಂಸ್ಕರಣೆ, ಮರುಬಳಕೆ ಹಾಗೂ ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆಗಳ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮನೆಮನೆ ಕಸ ಸಂಗ್ರಹಣೆ, ಒಣ ಕಸದ ಮರುಬಳಕೆ, ಪರಿಸರ ಸುರಕ್ಷತಾ ಕ್ರಮಗಳು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೇ.100ರಷ್ಟು ಕಸ ವಿಂಗಡಣೆ ಗುರಿ ಸಾಧಿಸಲು ಸೂಚನೆ ನೀಡಿದರು. ಈ ವೇಳೆ ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.



