ಮೈಸೂರು: ಮೈಸೂರು ನಗರದಲ್ಲಿರುವ ರಾಯನ ಕೆರೆ ನೀರು ಸಂಸ್ಕರಣಾ ಘಟಕ ಮತ್ತು ಘನ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಇಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಸಂಸ್ಕರಣಾ ಘಟಕವು ಒಳಚರಂಡಿ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಬಿಡುಗಡೆ ಮಾಡುವ ವ್ಯವಸ್ಥೆ ಹೊಂದಿದ್ದು, ಇದರ ನಿರ್ವಹಣೆ ಉತ್ತಮವಾಗಿದೆ ಎಂದು ಅವರು ತಿಳಿಸಿದರು. ಆದರೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡಿದರು.
ಮಲಿನ ನೀರು ಎತ್ತುವ ಯಂತ್ರಾಲಯಕ್ಕೂ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ನಂತರ ರಾಯನ ಕೆರೆ ಘನ ತ್ಯಾಜ್ಯ ಘಟಕ ಪರಿಶೀಲಿಸಿದ ಉಪ ಲೋಕಾಯುಕ್ತರು, ಹಸಿ ಹಾಗೂ ಒಣ ತ್ಯಾಜ್ಯ ಬೇರ್ಪಡಿಸುವ ವಿಧಾನವನ್ನು ಮೆಚ್ಚಿ, ಮೈಸೂರಿನ ಮಾದರಿಯು ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಘಟಕದ ಸುತ್ತ 5-10 ಕಿ.ಮೀ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು. ತ್ಯಾಜ್ಯ ಘಟಕದಲ್ಲಿ ಗಿಡಗಂಟೆ ತೆರವುಗೊಳಿಸುವ, ಸಿಬ್ಬಂದಿಗೆ ಮಾಸ್ಕ್, ಬೂಟ್, ಗ್ಲೌಸ್ ನೀಡುವ ಹಾಗೂ ಪ್ರತಿನಿತ್ಯ ಆರೋಗ್ಯ ತಪಾಸಣೆ ಮಾಡಿಸಲು ಸೂಚನೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್, ಮಾಲಿನ್ಯ ನಿಯಂತ್ರಣ ಮಂಡಳಿಯ ಉಮಾ ಶಂಕರ್, ತಹಶೀಲ್ದಾರ್ ಮಹೇಶ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.