ಪಾಂಡವಪುರ : ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ಪಾಂಡವಪುರ ಉಪವಿಭಾಗಾ ಧಿಕಾರಿ ಎಲ್.ಎಂ.ನಂದೀಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಉಮಾದೇವಿ ಫೆ.೨೮.೨೦೨೪ರಂದು ಮೈಸೂರು ಉಪವಿಭಾಗದ ಪ್ರಭಾರ ಉಪ ವಿಭಾಗಾಧಿಕಾರಿ ಯಾಗಿ ಎಲ್.ಎಂ. ನಂದೀಶ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ
ದಾಖಲಾಗಿದ್ದ ಪ್ರಕರಣಗಳ ಎದುರುದಾರರಿಗೆ ವಿಚಾರಣೆಗೆ ಅವಕಾಶ ಕಲ್ಪಿಸದೆ, ಅವರಿಂದ ದಾಖಲೆಗಳನ್ನು ಪಡೆದುಕೊಳ್ಳದೆ, ವಿಚಾರಣೆಗೆ ತಗೆದುಕೊಂಡ ದಿನದಂದೇ ಆದೇಶ ಹೊರಡಿಸಿರುವುದರ ಜತೆಗೆ ಪಕ್ಷಕಾರರು ಅವರ ನಿಲುವುಗಳನ್ನು ಮಂಡಿಸಲು ಅವಕಾಶ ನೀಡದೆ ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬಿತ್ಯಾದಿ ಆರೋಪಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಉಪ ವಿಭಾಗಾಧಿಕಾರಿಗಳ ನ್ಯಾಯಾಲ ಯದಲ್ಲಿ ಇತ್ಯರ್ಥಪಡಿಸಿ ಆಟೋ-ಮುಟೇಶನ್ ಮೂಲಕ ಅಪ್ ಲೋಡ್ ಮಾಡಲಾಗಿರುವ ೪೬ ಪ್ರಕರಣಗಳಲ್ಲಿ ಕೆಲವು ಪ್ರಕರಣಗಳು ಸರ್ಕಾರದ ಹಿತಾಸಕ್ತಿಗೆ ಒಳಪಟ್ಟಿರುವು ದನ್ನು ಗಮನಿಸಿದ್ದರೂ, ದಾಖಲೆಗಳನ್ನು ಮಂಡಿಸಲು ತಹಸೀಲ್ದಾರ್ ಅವರಿಗೆ ಅವಕಾಶ ನೀಡದೇ ಆದೇಶ ಹೊರಡಿಸಲಾಗಿದೆ.
ಒಟ್ಟು ಪ್ರಕರಣಗಳಲ್ಲಿ ತಹಸೀಲ್ದಾರ್ ಅವರು ಪ್ರತ್ಯೇಕ ವರದಿ ಸಲ್ಲಿಸಿದ್ದರೂ, ಅದನ್ನು ಪರಿಶೀಲಿಸಿಲ್ಲ. ಜತೆಗೆ ಇದರಲ್ಲಿ ಕೆಲವು ಪ್ರಕರಣಗಳು ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದ್ದಾಗಿದ್ದು, ಈ ಪ್ರಕರಣದ
ವಿರುದ್ಧ ವ್ಯತಿರಿಕ್ತ ಆದೇಶ ಹೊರಡಿಸಲಾಗಿದೆ ಎಂಬ ಆರೋಪಗಳನ್ನು ಆದೇಶ ಪತ್ರದಲ್ಲಿ ವಿವರಿಸಲಾಗಿದೆ.
ಎಸಿ ಮೇಲಿನ ಆರೋಪಗಳೇನು: ೪೦ ಪ್ರಕರಣಗಳಿಗೆ ನೋಟಿಸ್ ನೀಡದೆ ಆದೇಶಿಸಿರುವುದು, ಒಂದೇ ವಿಚಾರಣೆಯಲ್ಲಿ ಪಕ್ಷಕಾರರಿಗೆ ನೋಟಿಸ್ ಜಾರಿ ಮಾಡದೇ ಆದೇಶಕ್ಕೆ ಕಾಯ್ದಿರಿಸಿಕೊಂಡ ೩೭ ಪ್ರಕರಣಗಳು, ಮೇಲ್ಮನವಿ (ಅಫೀಲು) ಸ್ವೀಕೃತವಾದ ಒಂದೇ ದಿನದಲ್ಲಿ ೬ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು, ಆರ್‌ಸಿಸಿಎಂಎಸ್ ತಂತ್ರಾಂಶದಲ್ಲಿ ಅಳವಡಿಸದೇ ವಿಚಾರಣೆ ನಡೆಸಿ ೧ ಪ್ರಕರಣಕ್ಕೆ ಆದೇಶ ನೀಡಿರುವುದು, ಸರ್ಕಾರದ ಹಿತಾಸಕ್ತಿ ಇರುವ ೧೦ ಪ್ರಕರಣಗಳಲ್ಲಿ ತಹಸೀಲ್ದಾರ್ ಅವರಿಂದ ದಾಖಲೆ, ಮಾಹಿತಿ ಪಡೆಯದೆ ಆದೇಶ ನೀಡಲಾಗಿದೆ ಎಂಬ ಆರೋಪಗಳನ್ನು ಆದೇಶದಲ್ಲಿ ಪಟ್ಟಿ ಮಾಡಲಾಗಿದೆ.
ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವ ಆರೋಪಗಳು ಕಂಡುಬಂದಿರುವುದ್ದರಿಂದ ಸರ್ಕಾರಿ ಸೇವೆಯಲ್ಲಿ ಮುಂದುವರೆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.