ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿದ್ದ ಸಾಲಿಗ್ರಾಮ ತಾಲೂಕು ಹಳಿಯೂರು ಮತ್ತು ಕೆ.ಆರ್.ನಗರ ತಾಲೂಕು ಹೆಬ್ಬಾಳು ಗ್ರಾಮ ಪಂಚಾಯಿತಿಗಳಲ್ಲಿ ನಿಯಮಾನುಸಾರ ಟೆಂಡರ್ ಕರೆಯದೆ ಕರ್ತವ್ಯ ಲೋಪವೆಸಗಿರುವ ಇಬ್ಬರು ಪಿಡಿಒಗಳನ್ನು ಅಮಾನತ್ತು ಮಾಡಬೇಕು ಎಂದು ಹೆಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್.ಜಲೇಂದ್ರ ಹೇಳಿದರು.
ಈ ಸಂಬoಧ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಅವರ ಆದೇಶದಂತೆ ತಾಲೂಕು ಪಂಚಾಯಿತಿ ವತಿಯಿಂದ ತನಿಖೆ ಮಾಡಿ ಇಬ್ಬರು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕರ್ತವ್ಯ ಲೋಪ ಮಾಡಿರುವುದರ ಜತೆಗೆ ಹಣ ದುರುಪಯೋಗ ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ತಿಳಿಸಿರುವುದರಿಂದ ಇವರುಗಳನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಜಿಲ್ಲಾ ಪಂಚಾಯಿತಿಗೆ
ಕಳೆದ ೯ ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ದೂರಿದ್ದರು.
ಮೈಸೂರು ಜಿಲ್ಲೆಯ ೩೨ ಗ್ರಾಮ ಪಂಚಾಯಿತಿಗಳಿಗೆ ತಲಾ ೨೪ ಲಕ್ಷದ ೭೫ ಸಾವಿರ ರೂಗಳಂತೆ ೭ ಕೋಟಿ ೯೨ ಲಕ್ಷ ರೂಗಳು ಡಿಜಿಟಲ್ ಗ್ರಂಥಾಲಯ, ಅಂಗನವಾಡಿ, ಶಾಲೆಗಳಿಗೆ ಸಾಮಾಗ್ರಿ ಖರೀದಿ ಮಾಡಲು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ನಿಯಮದ ಪ್ರಕಾರ ಪಿಡಿಒಗಳು ಸಂಬoಧ ಪಟ್ಟ ಇಂಜಿನಿಯರ್ ಮತ್ತು
ಲೆಕ್ಕಾಧಿಕಾರಿಗಳಿಂದ ಟೆಂಡರ್ ಮೌಲ್ಯ ಮಾಪನ ಹಾಗೂ ಆರ್ಥಿಕ ಪರಿಶೀಲನಾ ಪ್ರಾಧಿಕಾರದಿಂದ ಪರಿಶೀಲನೆ ಮತ್ತು ಅನುಮೋದನೆ ಪಡೆಯದೆ ಇ-ಟೆಂಡರ್ ಮಾಡಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಅಭಿವೃದ್ದಿ ಅಧಿಕಾರಿಗಳು ತಮ್ಮಗೆ ಬೇಕಾದ ಏಜೆಂಸ್ಸಿಗೆ ಟೆಂಡರ್ ನಿಲ್ಲಿಸುವ ಸಲುವಾಗಿ ಗೌಪ್ಯವಾಗಿ ಟೆಂಡರ್ ಕರೆದಿದ್ದಾರೆ ಇವರುಗಳು ಲೋಪ ಮಾಡಿರುವುದು ತನಿಖಾ ವರದಿಯಿಂದಲೂ ಧೃಡಪಟ್ಟಿರುವುದರಿಂದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಪಿಡಿಒಗಳನ್ನು ಅಮಾನತ್ತು ಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.