ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ದರೂ 7 ಗಂಟೆ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಪರವಾಗಿ ಡಿ.ಟಿ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇದೆ. ಸದ್ಯ ಕರ್ನಾಟಕದಲ್ಲಿ 19 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಆಗುತ್ತಿದೆ. 7 ಗಂಟೆ ವಿದ್ಯುತ್ ನಿರಂತರವಾಗಿ ಕೊಡಲು ಆಗದೇ ಹೋದರೂ ಒಮ್ಮೆ 4 ಗಂಟೆ, ಮತ್ತೊಮ್ಮೆ 3 ಗಂಟೆ ವಿದ್ಯುತ್ ಕೊಡುತ್ತಿದ್ದೇವೆ ಎಂದರು.
ವಿದ್ಯುತ್ ಬೇಡಿಕೆ ಹಿನ್ನಲೆಯಲ್ಲಿ ಈ ಬಾರಿ 56 ಸಬ್‌ಸ್ಟೇಷನ್ ಪ್ರಾರಂಭ ಮಾಡಿದ್ದೇವೆ. ಮುಂದಿನ ವರ್ಷ 100 ಸಬ್‌ಸ್ಟೇಷನ್ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ. ರಾಯಚೂರು, ಕಲಬುರಗಿ ಭಾಗದಲ್ಲಿ ಬೆಳಗ್ಗೆ ಹೊತ್ತು ವಿದ್ಯುತ್ ಕೊಡಲು ನಮಗೆ ಸಮಸ್ಯೆ ಇಲ್ಲ. ಬೆಳಗ್ಗೆ ಮತ್ತು ಸಂಜೆ ನಮಗೆ ಸಮಸ್ಯೆ ಇದೆ. ಇದಕ್ಕಾಗಿ ಕರೆಂಟ್ ಪಂಪ್ ಸ್ಟೋರೇಜ್ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಕೂಡಾ ಮಾಡುತ್ತಿದ್ದೇವೆ ಎಂದು ಹೇಳಿದರು.