-ವಿನಯ್ ದೊಡ್ಡಕೊಪ್ಪಲು ಹೊಸೂರು : ನಾಲೆಯಿಂದ ಹರಿಯುತ್ತಿರುವ ತ್ಯಾಜ್ಯ ನೀರು…ಉರಿದು ಹೋದ ಭತ್ತದ ಬೆಳೆ…ಹತ್ತಾರು ಎಕರೆಯಲ್ಲಿ ಬೆಳೆದ ಭತ್ತ ನಾಶವಾಗುವ ಭೀತಿ ಇದು ಚುಂಚನಕಟ್ಟೆ ಕಟ್ಟೆಪುರ ನಾಲಾ ವ್ಯಾಪ್ತಿಯ ರೈತರ ಗೋಳು.. ಸಾಲಿಗ್ರಾಮ ತಾಲ್ಲೋಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ನೀರು ಕಟ್ಟೆಪುರ ನಾಲೆಯನ್ನು ಸೇರಿ ರೈತರ ಜಮೀನುಗಳಿಗೆ ನಿರಂತರವಾಗಿ ಹರಿದ ಕಾರಣ ರಾಸಾಯನಿಕ ಮಿಶ್ರಣದ ನೀರಿನ ಕಾರಣ ಹುಲುಸಾಗಿ ಬೆಳೆದಿದ್ದ ಭತ್ತದ ಪೈರುಗಳು ಇದೀಗ ಬೆಂಕಿಯಲ್ಲಿ ಸುಟ್ಟಂತೆ ಆಗುತ್ತಿದ್ದು ಅಲ್ಲದೇ ರೈತರ ಮನವಿಗೂ ಸ್ಪಂದಿಸದೇ ಇಂದಿಗೂ ನೀರು ಹರಿಯುತ್ತಿರುವುದು ಸಮಸ್ಯೆ ಹೆಚ್ಚಾಗುವಂತೆ ಮಾಡಿದೆ.
ಕಳೆದ ೧೦ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಖಾನೆ ಕಳೆದ ಹಂಗಾಮಿನಲ್ಲಿ ನಿರಾಣಿ ಶುಗರ್ಸ ಮಾಲೀಕತ್ವದಲ್ಲಿ ಆರಂಭವಾಗಿದ್ದು ಕಳೆದ ವರ್ಷವೇ ಕಾರ್ಖಾನೆಯ ತ್ಯಾಜ್ಯ ವಿಷಯುಕ್ತ ನೀರು ಹರಿದಿದ್ದರೂ ಅಲ್ಲದೇ ಈ ಭಾಗದ ರೈತರು ದೂರಿದಾಗ ತ್ಯಾಜ್ಯ ನೀರನ್ನು ಬೇರೆಡೆಗೆ ಪಂಪ್ ಮಾಡಲಾಗುತ್ತದೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಈ ಹಿಂದಿನಿಂದಲೂ ಕಾರ್ಖಾನೆಯ ಮಾಳದಲ್ಲಿ ತೆರೆದ ಬಾವಿಯನ್ನು ಮಾಡಿದ್ದು ಅಲ್ಲಿಗೆ ಪೈಪ್‌ಗಳ ಮೂಲಕ ಸಾಗಿಸಿ ತುಂಬಿಸಲಾಗುತ್ತಿತ್ತು ಆದರೆ ಅಲ್ಲಿನ ಪೈಪ್‌ಲೈನ್ ಹಾಳಾದ ಕಾರಣ ರೈತರು ಕೇಳಿದಾಗ ಪಂಪ್ ಮಾಡುವ ನಾಟಕವಾಡಿ ಬೇರೆ ಸಮಯದಲ್ಲಿ ನಾಲೆಗೆ ನೀರು ಬಿಡುತ್ತಾ ಇರುತ್ತಾರೆ ಎಂದು ರೈತರು ಆರೋಪಿಸುತ್ತಾರೆ.
ಇಲ್ಲಿಂದ ಮುಂದೆ ಶ್ರೀರಾಂಪುರ,ಕೆಸ್ತೂರುಕೊಪ್ಪಲು ಮಾರ್ಗವಾಗಿ ನಾಲೆಯ ನೀರು ಹರಿಯುತ್ತಿದ್ದು ಚುಂಚನಕಟ್ಟೆ ಸಮೀಪ ಮಾತ್ರವಲ್ಲದೇ ಇಲ್ಲಿಂದ ಮುಂದೆ ಸುಮಾರು ೫ಕೀಮಿ ಸಾಗುವ ಈ ನಾಲೆಯ ನೀರು ಸಂಪೂರ್ಣವಾಗಿ ವಿಷಯುಕ್ತವಾಗುತ್ತಿದ್ದು ಕೆಸ್ತೂರುಕೊಪ್ಪಲು ಬಳಿ ಕೆರೆಕಟ್ಟೆಗಳನ್ನು ಸೇರಿ ಸಹಿಸಲು ಆಸಾಧ್ಯವಾದ ದುರ್ವಾಸನೆ ಬೀರುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುವುದು ರೈತರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲೆಗೆ ತ್ಯಾಜ್ಯ ನೀರು ಹರಿಯುತ್ತಿರುವುದು
ಒಟ್ಟಾರೆ ಕಟ್ಟೆಪುರ ಬಲದಂಡಾ ನಾಲೆಯ ನೀರು ಸ್ಥಗಿತಗೊಂಡು ಭತ್ತವನ್ನು ಕಾಪಾಡಲು ಬೇರೆ ಕಡೆಯಿಂದ ನೀರು ಹಾಯಿಸಿ ಬೆಳೆ ಬೆಳೆಯುತ್ತಿರುವ ಇಲ್ಲಿನ ರೈತರಿಗೆ ಕಾರ್ಖಾನೆಯ ತ್ಯಾಜ್ಯ ನೀರಿನಿಂದ ಸಂಪೂರ್ಣ ಬೆಳೆ ಈಗಾಗಲೇ ಈ ವಿಷಯುಕ್ತ ರಾಸಾಯನಿಕ ನೀರಿನಿಂದ ತೋಯ್ದು ಹೋಗಿದ್ದು ಧಿಕ್ಕೇ ತೋಚದಂತಾಗಿದ್ದು ಈಗಲಾದರೂ ತಾಲ್ಲೋಕು ಆಡಳಿತ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪರಿಹಾರ ಒದಗಿಸುವರೇ ಕಾದು ನೋಡಬೇಕಿದೆ.
ಕಾರ್ಖಾನೆಯ ಅಧಿಕಾರಿಗಳು ತ್ಯಾಜ್ಯ ನೀರನ್ನು ಯಾವುದೇ ಭಯಭೀತಿ ಇಲ್ಲದೇ ರೈತರು ಬೆಳೆಗಳು ಹಾಳಾಗುತ್ತವೆ ಎಂಬ ಅರಿವೇ ಇಲ್ಲದೇ ನಿರಂತರವಾಗಿ ನಾಲೆಗೆ ಬಿಡುತ್ತಿದ್ದು,ಇದೀಗ ಬೆಳೆ ಹಾಳಾಗಿದ್ದರೂ ಈ ಬಗ್ಗೆ ಸೂಕ್ತವಾಗಿ ಸ್ಪಂಧಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು. -ಹೆಚ್.ಡಿ ಭಾಸ್ಕರ್, ರೈತಮುಖಂಡ