Tuesday, July 22, 2025
Google search engine

Homeಸ್ಥಳೀಯದೇವನಹಳ್ಳಿ ಭೂ ಸ್ವಾಧೀನ ರದ್ದು ಮತ್ತು ಖರೀದಿ ಒಂದು ಪ್ರಹಸನ : ರೈತರಿಗೆ ಸಂಪೂರ್ಣ ನ್ಯಾಯ...

ದೇವನಹಳ್ಳಿ ಭೂ ಸ್ವಾಧೀನ ರದ್ದು ಮತ್ತು ಖರೀದಿ ಒಂದು ಪ್ರಹಸನ : ರೈತರಿಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ: ಇಂಗಲಗುಪ್ಪೆ ಕೃಷ್ಣೇಗೌಡ

ಮೈಸೂರು : ದೇವನಹಳ್ಳಿ ಭೂಸ್ವಾಧೀನ ರದ್ದು ಮಾಡಿದ್ದೇವೆ ಎನ್ನುವ ರಾಜ್ಯ ಸರ್ಕಾರ, ಭೂಮಿ ಕೊಡುವ ರೈತರಿಂದ ಖರೀದಿಯೂ ಮಾಡುತ್ತೇವೆ ಎನ್ನುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಮೂಲಕ ನ್ಯಾಯ ಕೊಟ್ಟಹಾಗೂ ಆಗಬೇಕು, ಭೂಮಿ ಕಿತ್ತುಕೊಂಡಂಗೂ ಆಗಬೇಕು ಎಂಬ ಚಾಣಾಕ್ಷ ನಡೆ ಅನುಸರಿಸಿದ್ದು, ಇದರಿಂದ ದೇವನಹಳ್ಳಿ ರೈತರಿಗೆ ನಿಜವಾಗಲೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಮತ್ತು ರೈತ ಹೋರಾಟಗಾರರ ನಡುವೆ ಒಂದು ರೀತಿ ಮ್ಯಾಚ್ ಫಿಕ್ಸಿಂಗ್ ಆಗಿದ್ದು, ಇದರಲ್ಲಿ ಕಿಕ್ ಬ್ಯಾಕ್ ರಾಜಕಾರಣದ ವಾಸನೆ ಬರುತ್ತಿದೆ.

ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಿದ್ದೇವೆ ಎಂದು ಹೇಳಿಕೊಂಡು ರೈತರು, ಹೋರಾಟಗಾರರಿಂದ ಶಹಬ್ಬಾಸ್‌ಗಿರಿ ಪಡೆದ ಕಾಂಗ್ರೆಸ್ ಸರ್ಕಾರ, ಮತ್ತೊಂದು ಕಡೆ ರೈತರು ಭೂಮಿ ಕೊಟ್ಟರೆ ಉತ್ತಮ ಬೆಲೆಗೆ ಖರೀದಿಸುತ್ತೇವೆ ಎನ್ನುವ ಮೂಲಕ ಸರ್ಕಾರವೇ ಅಥವಾ ಸರ್ಕಾರದ ಮುಖ್ಯಸ್ಥರೇ ಒಂದೇ ಚಿತ್ರದ ನಾಯಕ ನಟನಾಗಿಯೂ ಮತ್ತು ಅದೇ ಚಿತ್ರದ ಖಳನಟನಾಗಿಯೂ ಡಬಲ್ ಆಕ್ಟಿಂಗ್ ಮಾಡುತ್ತಿದ್ದಾರೆ.ಈ ಚಿತ್ರದಲ್ಲಿ ಹಸಿರು ಟವಲ್ ಹೊದ್ದ ಕೆಲವು ನಕಲಿ ಹೋರಾಟಗಾರರು ಪೋಷಕ ನಟರಾಗಿ ನಟಿಸಿದ್ದಾರೆ. ಇದು ದೇವನಹಳ್ಳಿ ಭೂ ಸ್ವಾಧೀನ ಹೋರಾಟದ ನಿಜವಾದ ಕತೆಯಾಗಿದೆ ಎಂದು ಕಿಡಿ ಕಾರಿದರು.

ರೈತ ಹೋರಾಟಗಾರರು ಮಾತ್ರ ನಾವು ಗೆದ್ದೆವು ಎಂದು ಒಂದು ಕಡೆ ತಮ್ಮ ಟವಲ್ ಒದರುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದು, ಮತ್ತೊಂದು ಕಡೆ ಸರ್ಕಾರವನ್ನು ಹೊಗಳುವ ಮೂಲಕ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ದೇವನಹಳ್ಳಿ ಭೂಸ್ವಾಧೀನ ರದ್ದು ಎಂಬುದು ರಾಜ್ಯ ಸರ್ಕಾರ ಮತ್ತು ಹೋರಾಟಗಾರರು ನಡೆಸುತ್ತಿರುವ ಒಂದು ನಾಟಕ ಅಷ್ಟೇ, ಸರ್ಕಾರ ತನಗೆ ಅಗತ್ಯವಿದ್ದ ೧೭೭೭ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈ ಬಿಟ್ಟಿದ್ದೇವೆ ಎಂದು ಹೇಳಿದರೆ,

೫೦೦ಕ್ಕೂ ಹೆಚ್ಚು ರೈತರು ಸರ್ಕಾರಕ್ಕೆ ಭೂಮಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ, ರೈತ ನಾಯಕರೇ ಇದರ ದಲ್ಲಾಳಿಗಳು ಎನ್ನುವುದೂ ಸಹ ನಿಜವಾದ ಕತೆಯಾಗಿದೆ. ಸ್ವಾಧೀನ ಅಥವಾ ಖರೀದಿ ಹೇಗಾದರೂ ಸರಿ ರೈತರಿಂದ ಭೂಮಿ ಪಡೆದು ಅದನ್ನು ಉದ್ಯಮಿಗಳಿಗೆ ನೀಡಿದರೆ ನೂರಾರು ಕೋಟಿ ಕಿಕ್‌ಬ್ಯಾಕ್ ಪಡೆಯಬಹುದು ಎನ್ನುವುದು ರಾಜಕಾರಣಿಗಳ ಹುನ್ನಾರವಾದರೇ, ಒಂದು ವೇಳೆ ಸರ್ಕಾರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ, ಉದ್ಯಮಿಗಳಿಂದ ಮತ್ತು ಸರ್ಕಾರದಿಂದ, ಭೂಸ್ವಾಧೀನ ರದ್ದಾದರೆ ರಿಯಲ್ ಎಸ್ಟೇಟ್ ಕುಳಗಳಿಂದ ಕಿಕ್‌ಬ್ಯಾಕ್ ಪಡೆಯುವುದು ಹೋರಾಟಗಾರರ ನಿಜವಾದ ಉದ್ದೇಶವಾಗಿದೆ.

ಒಟ್ಟಾರೆ ದೇವನಹಳ್ಳಿ ರೈತ ಹೋರಾಟಕ್ಕೆ ಸಂಪೂರ್ಣ ಜಯ ಸಿಕ್ಕಿಲ್ಲ. ಎನ್ನುವುದು ಮಾತ್ರ ಸ್ಪಷ್ಟವಾಗಿದೆ.
ದೇವನಹಳ್ಳಿ ಭೂಸ್ವಾಧೀನ ರದ್ದು ಪಡಿಸಿರುವುದಾಗಿ ಹೇಳುವ ಸರ್ಕಾರ ಮತ್ತೆ ಆ ಭಾಗದಲ್ಲಿ ಭೂಮಿ ಖರೀದಿಗೆ ಮುಂದಾಗಿರುವುದು ಏಕೆ? ಇದು ಸರ್ಕಾರ ರೈತರಿಗೆ ಪರೋಕ್ಷವಾಗಿ ಮಾಡಿರುವ ದ್ರೋಹ ಅಲ್ಲವೇ?
ತಮ್ಮ ಹೋರಾಟದಿಂದ ಭೂ ಸ್ವಾಧೀನ ಪ್ರಕ್ರಿಯೆ ರದ್ದಾಯಿತು ಎಂದು ಬೀಗುವ ರೈತ ಸಂಘಟನೆಗಳ ಮುಖ್ಯಸ್ಥರು, ಹೋರಾಟಗಾರರು ಇದಕ್ಕೆ ಉತ್ತರಿಸಬೇಕು ಎಂದು ಪ್ರಶ್ನಿಸಿದರು.

ದೇವನಹಳ್ಳಿ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ರಿಯಲ್ ಎಸ್ಟೆಟ್ ಕುಳಗಳು, ಉದ್ಯಮಿಗಳು, ಸಿನಿಮಾ ನಟರು ಹೊಂದಿದ್ದಾರೆ. ದಲಿತರ ನೂರಾರು ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳು ಜಿಪಿಎ ಮಾಡಿಸಿಕೊಂಡಿದ್ದಾರೆ. ಇಲ್ಲಿ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾದರೆ ಅವರ ಭೂಮಿಗೆ ನಿರೀಕ್ಷಿತ ಬೆಲೆ ಸಿಗುವುದಿಲ್ಲ ಎಂದು ಸ್ವಾಧೀನ ರದ್ದು ಮಾಡಿಸಲು ರಿಯಲ್ ಎಸ್ಟೇಟ್ ಕುಳಗಳು ಹೋರಾಟಗಾರರಿಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ದೇವನಹಳ್ಳಿಗೆ ಹೋರಾಟಕ್ಕೆಂದು ವಲಸೆ ಹೋದ ಈ ಭಾಗದ ಹಲವು ರೈತ ಹೋರಾಟಗಾರರು ದೇವನಹಳ್ಳಿ ರೈತರಿಂದಲೂ ಚಂದಾ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಇದೆ. ಇದನ್ನು ಅವರವರ ಆತ್ಮ ವಿಮರ್ಶೆಗೆ ಬಿಡುತ್ತೇವೆ.

ಟ್ಟಾರೆ ಸರ್ಕಾರ ದೇವನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ರೈತರ ಭೂಮಿ ಖರೀದಿ ಮಾಡಬಾರದು, ರಿಯಲ್ ಎಸ್ಟೆಟ್ ದಂಧೆಗೂ ಅವಕಾಶ ನೀಡಬಾರದು ಎಂಬುದು ನಮ್ಮ ಒತ್ತಾಯವಾಗಿದೆ ಎಂದು
ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ಕೆಂಪರಾಜು, ವರುಣಾ ಕ್ಷೇತ್ರದ ಅಧ್ಯಕ್ಷರಾದ ಪುಟ್ಟಸ್ವಾಮಿ ನಾಯಕ, ವಿಜಯನಗರ ಜಿಲ್ಲಾಧ್ಯಕ್ಷರಾದ ಲೋಕೇಶ್, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಸುರೇಶ್ ನಾಯಕ, ಜಯಪುರ ಕಾಳಪ್ಪ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular