ಚಾಮರಾಜನಗರ : ದೇವನೂರು ಮಹಾದೇವ ರವರು ಕನ್ನಡದ ಅಪರೂಪದ, ಸರಳ ವ್ಯಕ್ತಿತ್ವದ ಸಾಹಿತಿ. ದೇವನೂರು ಮಹಾದೇವ ರವರು ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷೆಯಲ್ಲಿ ನೀಡಬೇಕು ಎಂದು ಪ್ರಬಲ ಒತ್ತಾಯ ಮಾಡಿ ತಮ್ಮದೇ ನಿಲುವು ದಾಖಲಿಸಿದ ದೇವನೂರು ಮಹಾದೇವ ರವರು ಪ್ರತಿಯೊಬ್ಬರಿಗೂ ಮಾದರಿ ಸಾಹಿತಿ. ಪ್ರಶಸ್ತಿಗಳನ್ನು ನಯವಾಗಿ ಗೌರವದಿಂದ ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿತ್ವ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವನೂರು ಮಹಾದೇವ ರವರ ಸಾಹಿತ್ಯ ಕೊಡುಗೆಗಳು – ಚಿಂತನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸೃಜನಶೀಲ ಸಾಹಿತ್ಯವಾದ ಒಡಲಾಳ ಕೃತಿ ಈ ದೇಶದಲ್ಲಿ ವಿಶೇಷವಾದದ್ದು. ಭಾರತೀಯ ಪರಿಷತ್ 1984 ರಲ್ಲಿ ಒಡಲಾಳ ಕೃತಿಗೆ ಸೃಜನಶೀಲ ಸಾಹಿತ್ಯ ಕ್ಷೇತ್ರದ ಗೌರವವನ್ನು ನೀಡಿದೆ.ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕುಸುಮಬಾಲೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅನುಭವ ನೀಡಿದ, ಅಪಾರ ಓದುಗರನ್ನು ಸೃಷ್ಟಿಸಿದ ಸಾಹಿತ್ಯ. ಸಂಪೂರ್ಣ ಗ್ರಾಮೀಣ ಹಳ್ಳಿ ನುಡಿಗಟ್ಟುಗಳ ಸಾಹಿತ್ಯ ರಚಿಸಿರುವ ಪದ್ಯವು, ಗದ್ಯವೂ ಆಗಿರುವ ಕುಸುಮಬಾಲೆ ಗ್ರಾಮೀಣ ಜನತೆಯ ನಿಜ ಸಾಹಿತ್ಯವನ್ನು ಜಗತ್ತಿಗೆ ನೀಡಿದವರು.
ದೇವನೂರು ಕೃತಿ ಎದೆಗೆ ಬಿದ್ದ ಅಕ್ಷರ, ನೋಡು ಮತ್ತು ಕೂಡು, ವೈಚಾರಿಕ ಬರಹ ಗಾಂಧಿ ಮತ್ತು ಮಾವೋ ಅನುವಾದ ಗ್ರಂಥ ರಚಿಸಿದ ದೇವನೂರು ರವರು ಉತ್ತಮ ಲೇಖಕರು, ಹೋರಾಟಗಾರರು, ಸಮಾಜವಾದಿ ಚಿಂತಕರು, ರೈತ ಚಳುವಳಿಯ ಮೂಲಕ ಜನಸಾಮಾನ್ಯರ ಬದುಕಿನ ಬವಣೆಗಳ ಅರ್ಥವನ್ನು ಜಗತ್ತಿಗೆ ಸಾಹಿತ್ಯದ ಮೂಲಕ ಸಾರಿದ ದೇವನೂರು ರವರು ನಮ್ಮ ಮೈಸೂರು ಜಿಲ್ಲೆಯವರು ಎಂಬುದು ಮತ್ತಷ್ಟು ಹೆಮ್ಮೆ. ಎಲ್ಲವನ್ನು ಪ್ರೀತಿಯಿಂದ ಗೌರವದಿಂದ ಎಲ್ಲಾ ಸ್ಥಾನಮಾನಗಳನ್ನು ನಿರಾಕರಿಸಿದ ಶ್ರೇಷ್ಠ ವ್ಯಕ್ತಿತ್ವ ದೇವನೂರು ಮಹಾದೇವರದು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಪ್ರಾಚಾರ್ಯರಾದ ರಂಗಸ್ವಾಮಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ದೇವನೂರು ಮಹಾದೇವರ ಬಗ್ಗೆ ಅವರ ಕುಸುಮಬಾಲೆ ಒಡಲಾಳಗಳ ಕೃತಿಗಳ ಕುರಿತು ಮಾತನಾಡುವ, ತಿಳಿಯುವ ಕಾರ್ಯವನ್ನು ಅರ್ಥಪೂರ್ಣವಾಗಿ ಆಚರಿಸಿ ಸಂತೋಷವನ್ನು ಕಂಡಿದೆ ಎಂದರು.
ಜನಪದ ಕಲಾವಿದ ಹಾಗೂ ಮುಖಂಡರಾದ ರವಿಚಂದ್ರ ಪ್ರಸಾದ್ ಕಹಳೆ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅವರ ಜನ್ಮದಿನವಾದ ಜೂನ್ 10 ರಂದು ಚಿಂತನೆ ಕಾರ್ಯಕ್ರಮವನ್ನು ರೂಪಿಸಿರುವುದು ಬಹಳ ವಿಶೇಷ. ದೇವನೂರು ರವರು ಬಂಡಾಯ ಸಾಹಿತಿಗಳು. ದಲಿತ ಸಂಘರ್ಷ ಸಮಿತಿಯ ಮಹಾನ್ ಹೋರಾಟಗಾರರು. ಭ್ರಷ್ಟತೆಯ ವಿರುದ್ದ ಧ್ವನಿ ಎತ್ತಿದವರು. ಸಂಘಟನೆಯನ್ನು ರೂಪಿಸಿದವರು. ಮೈಸೂರು ಜಿಲ್ಲೆಯ ನಂಜನಗೂಡಿನ ದೇವನೂರು ಇವರ ಹುಟ್ಟೂರು. ನಂಜಯ್ಯ ಮತ್ತು ನಂಜಮ್ಮನವರ ಪುತ್ರರು.ಸಾಮಾಜಿಕ ಸಮಾನತೆ, ಸಾಮಾಜಿಕ ಏಕತೆಯನ್ನು ಇಡೀ ತಮ್ಮ ಬದುಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡು ಸರಳವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಬದುಕುತ್ತಿರುವ ಮಾದರಿಯಾದ ವ್ಯಕ್ತಿತ್ವ ದೇವನೂರು ಮಹಾದೇವರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ರವರು ದೇವನೂರು ಮಹಾದೇವರು ಕೃತಿಗಳ ಕುರಿತು ಕುಸುಮಬಾಲೆಯ, ದ್ಯಾವನೂರು, ಎದೆಗೆ ಬಿದ್ದ ಅಕ್ಷರ ಕೃತಿಗಳ ಕುರಿತು ಚಿಂತನೆ ಹಾಗೂ ಸಾಹಿತ್ಯದ ಶ್ರೇಷ್ಠ ಅಂಶಗಳನ್ನು ತಿಳಿಯುವ ಕಾರ್ಯವನ್ನು ಮಾಡಿರುವುದು ಹೆಮ್ಮೆ ಎಂದು ತಿಳಿಸಿದರು. ಅಖಿಲ ಕರ್ನಾಟಕ ಕನ್ನಡ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀನಿವಾಸಗೌಡ ಮಾತನಾಡಿ ದೇವನೂರು ಮಹಾದೇವ ರವರ ಸಾಹಿತ್ಯ ಚಿಂತನೆ ಕಾರ್ಯಕ್ರಮ ಮಹತ್ವ ವಾದದ್ದು. ಸರಳತೆಯ ಕನ್ನಡದ ಸಾಕ್ಷಿಪ್ರಜ್ಞೆ ಯ ಸಾಹಿತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಗಾಯಕ ಎಲ್.ಶಿವಲಿಂಗ ಮೂರ್ತಿರವರು ದೇವನೂರು ಮಹಾದೇವ ರವರ ಕೆಲವು ಸಾಲುಗಳನ್ನು ಹಾಡಿ ಗಮನ ಸೆಳೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಸರಸ್ವತಿ ಪದ್ಮಾಪುರುಷೋತ್ತಮ್, ಮಹಮ್ಮದ್, ಡಾ. ಪದ್ಮ ,ಯಡಿಯೂರು ನಾಗರಾಜು ಇದ್ದರು.



