ಬೆಂಗಳೂರು: ಲೈಂಗಿಕ ಹಗರಣದಲ್ಲಿ ಆರೋಪಿಯಾಗಿರುವ ಹಾಗೂ ಬಂಧನ ವಾರಂಟ್ ಎದುರಿಸುತ್ತಿರುವ ತಮ್ಮ ಮೊಮ್ಮಗನಿಗೆ ಜೆಡಿ(ಎಸ್) ವರಿಷ್ಠ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕಟು ಎಚ್ಚರಿಕೆ ನೀಡಿದ್ದಾರೆ. ಭಾರತಕ್ಕೆ ವಾಪಸಾಗು, ಪೊಲೀಸರಿಗೆ ಶರಣಾಗು, ಇಲ್ಲದೇ ಹೋದಲ್ಲಿ ನನ್ನ ಕೋಪಕ್ಕೆ ತುತ್ತಾಗುವೆ, ಎಂದು ದೇವೇಗೌಡ ಪ್ರಜ್ವಲ್‌ಗೆ ಬರೆದ ಪತ್ರವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಪ್ರಜ್ವಲ್ ರೇವಣ್ಣನಿಗೆ ಎಚ್ಚರಿಕೆ ನೀಡಿದ್ದೇನೆ, ಎಲ್ಲಿದ್ದರೂ ತಕ್ಷಣ ವಾಪಸಾಗುವಂತೆ ಮತ್ತು ಕಾನೂನು ಪ್ರಕ್ರಿಯೆಗೆ ಒಳಗಾಗುವಂತೆ ಸೂಚಿಸಿದ್ದೇನೆ. ಅವನು ಇನ್ನು ನನ್ನ ತಾಳ್ಮೆಯನ್ನು ಪರೀಕ್ಷಿಸಕೂಡದು, ಎಂದು ದೇವೇಗೌಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇ ೨೩, ೨೦೨೪ ದಿನಾಂಕವಿರುವ ಪತ್ರದ ಶೀರ್ಷಿಕೆ ಪ್ರಜ್ವಲ್ ರೇವಣ್ಣನಿಗೆ ನನ್ನ ಎಚ್ಚರಿಕೆ? ಎಂಬುದಾಗಿದೆ.
ನಾನು ಮೇ೧೮ ರಂದು ದೇವಸ್ಥಾನಕ್ಕೆ ಹೋಗುವ ಸಂದರ್ಭ ಪ್ರಜ್ವಲ್ ರೇವಣ್ಣ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದೆ. ಆ ಆಘಾತ ಮತ್ತು ಆತ ನನಗೆ, ಇಡೀ ಕುಟುಂಬಕ್ಕೆ, ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ಪಕ್ಷ ಕಾರ್ಯಕರ್ತರಿಗೆ ನೀಡಿದ ನೋವಿನಿಂದ ಹೊರಬರಲು ನನಗೆ ಸ್ವಲ್ಪ ಸಮಯವಾಯಿತು, ಎಂದು ದೇವೇಗೌಡ ಬರೆದಿದ್ದಾರೆ. ಆತ ತಪ್ಪಿತಸ್ಥನೆಂದು ತಿಳಿದಲ್ಲಿ ಆತನಿಗೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ನಾನು ಹೇಳಿದ್ದೇನೆ. ನನ್ನ ಪುತ್ರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಈ ಹಗರಣ ಆರಂಭಗೊಂಡಂದಿನಿಂದ ಇದೇ ಅಭಿಪ್ರಾಯ ಹೊಂದಿದ್ದಾರೆ.
ಪೊಲೀಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸು ಎಂದು ಮುಲಾಜಿಲ್ಲದೆ ಹೇಳಬಲ್ಲೆ. ಇದು ಅವನಿಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆ. ನೀನು ಮಾಡಿದ್ದೀಯ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ನೀನು ತಲೆಬಾಗದಿದ್ದಲ್ಲಿ ನೀನು ನನ್ನ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದರೆ ಕೂಡಲೇ ಬಂದು ಪೊಲೀಸರಿಗೆ ಶರಣಾಗು ಎಂದು ಎಚ್ಚರಿಸಿದ್ದಾರೆ.