ಮೈಸೂರು: ವಿದ್ಯಾವಂತರು ಉದ್ಯೋಗ ಇಲ್ಲ ಎಂದು ಕೂರದೆ ಕೌಶಲ್ಯ ವೃದ್ಧಿಸಿಕೊಂಡು ಅರ್ಹ ಉದ್ಯೋಗ ಗಿಟ್ಟಿಸಿಕೊಳ್ಳುವ ಸತತ ಪ್ರಯತ್ನ ಮಾಡಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ ಸಲಹೆ ನೀಡಿದರು. ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನಿಂದ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮೀಕಾಂತದೇವಸ್ಥಾನ ಆವರಣದಲ್ಲಿರುವ ಬಿಜಿಎಸ್ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು ಹೆಚ್ಚಾಗುತ್ತಿದ್ದು, ಉದ್ಯೋಗವಕಾಶಗಳು ಸಹ ಹೆಚ್ಚಾಗಿವೆ. ಆದರೆ ತಮಗೆ ಸುಲಭವಾಗಿರುವ ಹೆಚ್ಚು ವೇತನ ನೀಡುವ ಕೆಲಸ ಬೇಕು ಎಂದು ಕಾಯುವುದರಿಂದ ಅವಕಾಶಗಳು ದೊರೆಯದಂತಾಗಿದೆ. ಹಾಗಾಗಿ ಪದವಿ ಮಾಡಿದರೂ ಉದ್ಯೋಗ ಇಲ್ಲ ಎಂದು ಕೂರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ಈಗಿನ ಪರಿಸ್ಥಿತಿಯಲ್ಲಿ ಕಾಡು ಪ್ರಾಣಿಗಳು ಆಹಾರ ಹುಡುಕಿ ಬೇಟೆಯಾಡುವಂತೆ ಉದ್ಯೋಗ ಬೇಕಾದರೆ ಉದ್ಯೋಗ ಇರುವ ಕಡೆಗೆ ಅರಸಿ ಹೋಗಬೇಕಿದೆ. ಜೊತೆಗೆ ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕಿದೆ. ಬೇರೆಯವರಲ್ಲಿ ಉದ್ಯೋಗಕ್ಕೆ ಬಯಸದೆ ಸ್ವಯಂ ಉದ್ಯೋಗದಲ್ಲಿಯೂ ತೊಡಗಿಸಿಕೊಂಡು ಇತರರಿಗೂ ಉದ್ಯೋಗ ನೀಡುವಂತಾಗಬೇಕು ಎಂದರು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೈಸೂರು ರಾಮಕೃಷ್ಣಮಠದ ಅಧ್ಯಕ್ಷರಾದ ಸ್ವಾಮಿಮುಕ್ತಿದಾನಂದಾಜಿ ಮಹಾರಾಜ್ ಮಾತನಾಡಿ ಅನ್ನ, ಅಕ್ಷರ ದಾಸೋಹ ಮಾಡುವ ಜೊತೆಗೆ ಈಗ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿರುವುದು ಯುವ ಬ್ರಿಗೇಡ್‌ನ ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಹಿಂದೆ ಉದ್ಯೋಗ ಪುರುಷ ಲಕ್ಷಣ ಎಂದು ಹೇಳುತ್ತಿದ್ದರು. ಆದರೆ ಇಂದಿನ ದಿನದಲ್ಲಿ ಕುಟುಂಬ ನಿರ್ವಹಣೆಗೆ ಮಹಿಳೆಯರೂ ದುಡಿಯಬೇಕಾಗಿದೆ. ಹಾಗಾಗಿ ಉದ್ಯೋಗ ಪುರುಷ, ಮಹಿಳಾ ಲಕ್ಷಣ ಎನ್ನುವ ಕಾಲ ಇದಾಗಿದೆ. ಇದರಿಂದ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಇಂತಹದ್ದೇ ಉದ್ಯೋಗ ಬೇಕು ಎಂದು ಕೂರದೆ ತಮಗೆ ಸಿಕ್ಕ ಉದ್ಯೋಗವನ್ನು ಬಳಸಿಕೊಂಡು ಮುಂದೆ ಉತ್ತಮ ಉದ್ಯೋಗಕ್ಕೆ ಮೆಟ್ಟಿಲು ಮಾಡಿಕೊಳ್ಳಬೇಕು ಎಂದರು. ನಿವೃತ್ತ ಐಪಿಎಸ್ ಅಧಿಕಾರಿಯಾದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷೆ ಎಚ್.ಸಿ. ಕಿಶೋರ್‌ಚಂದ್ರ ಮಾತನಾಡಿ, ಉದ್ಯೋಗದಾತರು, ಉದ್ಯೋಗಿ ಆಕಾಂಕ್ಷಿಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಮಾತನಾಡಿ ಉದ್ಯೋಗವಕಾಶ ಇದ್ದರೂ ಎಲ್ಲಿ ಉದ್ಯೋಗವಿದೆ ಎನ್ನುವ ಮಾಹಿತಿಯೇ ಸಾಕಷ್ಟು ಜನರಲ್ಲಿ ಇರುವುದಿಲ್ಲ. ಇಂತವರಿಗಾಗಿ ಉದ್ಯೋಗದಾರರು ಹಾಗೂ ಉದ್ಯೋಗಿ ಆಕಾಂಕ್ಷಿಗಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಇಚ್ಚೆಯಾದ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ. ಒಕ್ಕಲುತನ ಮಾಡುವ ಎಲ್ಲ ವರ್ಗ ಮಕ್ಕಳಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡುವ ಬ್ರಿಗೇಡ್ ಕಾರ್ಯಕ್ಕೆ ಸದಾ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು. ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಮಾತನಾಡಿ ಸುಮಾರು ೫೦ಕ್ಕೂ ಅಧಿಕ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿದ್ದಾರೆ. ಹತ್ತನೇ ತರಗತಿಯಿಂದ ಪದವಿ ಪಡೆದ ಯುವಕರು ಸಹ ಈ ಉಚಿತ ಉದ್ಯೋಗ ಮೇಳದಲ್ಲಿ ಭಾಗವಹಿದ್ದು, ಎಲ್ಲರಿಗೂ ಉದ್ಯೋಗ ದೊರಕಿಸಿಕೊಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಬ್ರಿಗೇಡ್‌ನಿಂದ ಪ್ರತಿ ವರ್ಷ ಒಂದು ಸಾವಿರ ಜನರಿಗೆ ಉದ್ಯೋಗ, ೧೦೦ರಿಂದ ೧೫೦ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಐವರು ಐಎಎಸ್ ಅಭ್ಯರ್ಥಿಗಳಿಗೆ ನೆರವು ನೋಡುತ್ತಾ ಬರಲಾಗುತ್ತಿದೆ. ಒಕ್ಕಲಿಗ ಸಮಾಜ ಮಾತ್ರವಲ್ಲದೇ ದೇಶಕ್ಕೆ ಅನ್ನ ನೀಡುವ ಎಲ್ಲ ಜಾತಿ, ಜನಾಂಗದ ರೈತಾಪಿ ವರ್ಗಕ್ಕೆ ನೆರವು ನೀಡುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ಉಚಿತವಾಗಿ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೇಳ ಅಭೂತಪೂರ್ವ ಯಶಸ್ಸು ಕಂಡು ಸುಮಾರು ೬೦೦ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ. ಮೈಸೂರಿನಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಸಿಬಿಐ ಉಪ ಪೊಲೀಸ್ ಆಯುಕ್ತ ದಿವಾಕರ್ ಇದ್ದರು.
೯೩೮ ಅಭ್ಯರ್ಥಿಗಳಿಗೆ ಉದ್ಯೋಗವಕಾಶ: ಅನ್ನದಾತದ ಉದ್ಯೋಗ ಮೇಳದಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ೪೫, ಔಷಧ ಕ್ಷೇತ್ರದ ೧೦, ಸಾಮಾನ್ಯ ಕ್ಷೇತ್ರದ ೧೫ ಕಂಪನಿಗಳು ಭಾಗವಹಿಸಿದ್ದವು. ಎಸ್‌ಎಸ್‌ಎಲ್‌ಸಿ, ಪಿಯುಸಿ, ವಿವಿಧ ಕೋರ್ಸ್‌ಗಳ ಪದವಿ(ಉತ್ತೀರ್ಣ ಅಥವಾ ಅನುತ್ತೀರ್ಣ), ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಎನ್‌ಟಿಟಿ, ಟಿಸಿಎಚ್, ಬಿ.ಎಡ್, ಎಂ.ಎಡ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ೧೩೫೬ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ ೪೫೨ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕ ಪತ್ರ ವಿತರಿಸಿದರೆ ೪೮೬ ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು.