Monday, April 21, 2025
Google search engine

Homeಸ್ಥಳೀಯನಗರದೆಲ್ಲೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ

ನಗರದೆಲ್ಲೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ


ಮೈಸೂರು:
ನಗರದಲ್ಲೆಡೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರು ಪುರ್ಣಿಮೆಯನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಶಿಷ್ಯಂದಿರು ಗುರುವಿಗೆ ನಮನ ಸಲ್ಲಿಸಿದರೆ, ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಧಾರ್ಮಿಕ ವಿಧಿವಿಧಾನದ ಮೂಲಕ, ಶಾಲಾ-ಕಾಲೇಜುಗಳಲ್ಲಿಯೂ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸಿದರು.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಗುರು ಎಂದರೆ ಅಂಧಕಾರ ಅಥವಾ ಅಜ್ಞಾನ ದೂರ ಮಾಡುವವರು. ಹೀಗಾಗಿ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. ಶಾಲಾ-ಕಾಲೇಜುಗಳಲ್ಲೂ ಗುರು ಸ್ಮರಣೆ ನಡೆಯಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ವಾಂಸರನ್ನು ಸ್ಮರಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಲಾಯಿತು.
ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ, ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಹೆಬ್ಬಾಳ್‌ನ ಸಿರಡಿ ಸಾಯಿ ಸೇವಾಶ್ರಮ ಟ್ರಸ್ಟ್, ರಾಮಕೃಷ್ಣ ನಗರದ ಶ್ರೀ ಪ್ರಸನ್ನ ಗಣಪ ಮತ್ತು ಶಿರಡಿ ಸಾಯಿ ಶಕ್ತಿ ಸನ್ನಿಧಿ ಚಾರಿಟಬಲ್ ಟ್ರಸ್ಟ್, ಮಹರ್ಷಿ ಪತಂಜಲಿ ಧ್ಯಾನ ಕೇಂದ್ರ, ಬೋಗಾದಿಯ ಶ್ರೀ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಪ್ರತಿಯೊಂದರ ಹಿಂದೆಯೂ ಗುರುವಿದ್ದಾರೆ: ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ಗುರುಪೂರ್ಣಿಮೆ ಆಚರಿಸಲಾಗುತ್ತಿದೆ. ಪ್ರತಿಯೊಂದರ ಹಿಂದೆ ಗುರುವಿನ ಅವಶ್ಯಕತೆವಿದ್ದು, ಗುರುವಿನ ಆಶೀರ್ವಾದವಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಹೇಳಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಮಠಗಳ ಪಾತ್ರ ಅಮೋಘವಾಗಿದ್ದು, ಪ್ರತಿಯೊಂದು ಮಠಗಳಿಗೆ ಭಕ್ತರೇ ಆಧಾರ. ಧರ್ಮ, ಪರಂಪರೆ ಉಳಿಸಿಕೊಂಡು ಬರುವಲ್ಲಿ ಮಠಮಾನ್ಯಗಳ ಸೇವೆ ಅಮೋಘ. ಹೆತ್ತ ತಂದೆ ತಾಯಿ ಮತ್ತು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಸುಶಮಿಂದ್ರತೀರ್ಥ ಸೇವಾ ಸಮಿತಿ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ವರುಣ ಮಹದೇವ್, ಗೌರವಾಧ್ಯಕ್ಷ ಓಂಕಾರ್ ಆನಂದ್, ಕಾರ್ಯದರ್ಶಿ ಮಹದೇವ್, ಅರಮನೆ ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಗಿರೀಶ್ ಗೌಡ, ಮಹದೇವ್, ಸಂತೋಷ್ ಶಂಭು, ಪರಮೇಶ್ ಗೌಡ, ರವಿಚಂದ್ರ, ಸಂದೀಪ್, ನವೀನ್, ಸುಬ್ಬಣ್ಣ ಇನ್ನಿತರರು ಭಾಗಿಯಾಗಿದ್ದರು.

ಗುರುವಿನ ಅನುಗ್ರಹ ಮುಖ್ಯ: ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಬೇಕಾದರೆ ಗುರುವಿನ ಅನುಗ್ರಹಬೇಕು ಎಂದು ಹಿರಿಯ ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ ತಿಳಿಸಿದರು. ನಗರದ ರಾಮಾನುಜ ರಸ್ತೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಗುರುಗಳನ್ನು ಸ್ಮರಿಸುತ್ತಾ ಗುರುಪೂರ್ಣಿಮೆ ಅಂಗವಾಗಿ ನಡೆದ ಗೋಪೂಜೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಸಿ ನೀಡುವ ಮೂಲಕ ಗುರುವಂದನಾ ಕಾರ್ಯಕ್ರಮ ಆಚರಿಸಲಾಯಿತು.
ಬಳಿಕ ಮಾತನಾಡಿದ ಅವರು, ನಮ್ಮಲ್ಲಿರುವ ಚಂಚಲ ಬುದ್ಧಿ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮ ಚಿಂತನೆ ಮಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸಂಪ್ರದಾಯಕ್ಕೆ ವಿಶಿಷ್ಟ ಸ್ಥಾನ ಇದೆ. ಗುರು ವ್ಯಕ್ತಿ ಅಲ್ಲ ಶಕ್ತಿ. ಗುರುವಿನ ಸನ್ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ಮಿಸಬೇಕು ಎಂದರು. ಮೈಸೂರು ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ ಮಾತನಾಡಿ, ಭಾರತ ಸಂಸ್ಕೃತಿಯಲ್ಲಿ ಗುರು ಶಿಷ್ಯ ಪರಂಪರೆ ಮಹತ್ವ ಪಡೆದುಕೊಂಡಿದೆ. ಗುರುಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ದೇವರ ಸಮಾನ ಎಂದು ಪೂಜಿಸಿದ್ದ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆ ಉಳಿಸಿ ಬೆಳೆಸುತ್ತಿರುವ ಈ ಯುವಕರ ಕಾರ್ಯ ಮಹತ್ವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರ್ ಮೂರ್ತಿ, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ.ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗೋ ಪರಿವಾರ ಸಂಚಾಲಕರಾದ ರಾಕೇಶ್ ಭಟ್, ವಿನಯ್ ಕಣಗಾಲ್, ಸುಚಿಂದ್ರ, ನಾಗಶ್ರೀ ಸುಚೀಂದ್ರ, ವಿದ್ಯಾ, ಚಿತ್ರ ಸುಚೀಂದ್ರ, ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಮಯ್ಯ, ಮುಖ್ಯ ಶಿಕ್ಷಕ ಡಿ.ಶಿವಸ್ವಾಮಿ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular