Sunday, April 20, 2025
Google search engine

Homeಸ್ಥಳೀಯಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ

ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ

ಮೈಸೂರು: ಶ್ರಾವಣ ಮಾಸದ ನಾಗರಪಂಚಮಿಯನ್ನು ಸೋಮವಾರ ನಗರದ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಾರ್ವಜನಿಕರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರಲ್ಲದೆ ನಾಗರ ವಿಗ್ರಹಗಳಿಗೆ ಹಾಲು ಎರೆದು ನಮನಿಸಿದರು.

ನಗರದ ಹೊರ ವಲಯದಲ್ಲಿರುವ ಸಿದ್ದಲಿಂಗಪುರ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳು ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ನಗರದ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ನಾಗದೇವತೆಯ ವಿಗ್ರಹಗಳಿಗೆ ಹಾಲು ಎರೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು. ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ನಾಗರಾಜನಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.ಅಮೃತೇಶ್ವರ ದೇವಾಲಯದಲ್ಲಿ ನಾಗರಪಂಚಮಿ ಆಚರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ನಾಗರ ಪಂಚಮಿ ಹಬ್ಬ ಧಾರ್ಮಿಕ ನಂಬಿಕೆಯ ಜತೆಗೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ನಾಗದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿ, ಪಕ್ಷಿ ಸಂಕುಲ ಆರಾಧಿಸುವ ಮೂಲಕ ಮಾನವ ಪರಿಸರವನ್ನು ಪ್ರೀತಿಸಿ ಪೂಜಿಸುವ ವೈಜ್ಞಾನಿಕ ಬದ್ಧತೆಯನ್ನು ನಮ್ಮ ಪೂರ್ವಜರು ಈ ಹಬ್ಬ ಆಚರಿಸುವ ಮೂಲಕ ಅರಿತುಕೊಂಡಿದ್ದರು ಎಂದು ಹೇಳಿದರು.

ಇಂದು ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ಮನೋಭಾವನೆಗಳನ್ನು ತೊಡೆದುಹಾಕಿ ಭಾರತೀಯರು ನಾವೆಲ್ಲರೂ ಒಂದೆ ಎಂಬ ವಿಶ್ವ ಕುಟುಂಬ ಭಾವವನ್ನು ನಮ್ಮ ಹಬ್ಬಗಳು ಪ್ರಚುರ ಪಡಿಸುತ್ತವೆ ಎಂದರು.ಕಾರ್ಯಕ್ರಮದಲ್ಲಿ ಗಂಗಮ್ಮ, ಸಚಿನ್, ಸುಷ್ಮಾ, ಚರಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular