ಮಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದರ ನಡುವೆ ಇದೀಗ ಸೌಜನ್ಯ ಅವರ ತಾಯಿ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಎಸ್‌ಐಟಿ ವಶದಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯ ವಿರುದ್ಧ ಸೌಜನ್ಯ ತಾಯಿ ಕುಸುಮ ದೂರು ನೀಡಿದ್ದಾರೆ.
ಇಂದು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದಿಢೀರನೆ ಆಗಮಿಸಿದ ಕುಸುಮಾ ಚಿನ್ನಯ್ಯ ಅವರ ಈ ಹಿಂದಿನ ಹೇಳಿಕೆಗಳನ್ನು ಆಧರಿಸಿ ದೂರು ಕೊಟ್ಟಿದ್ದಾರೆ. ಎಸ್‌ಐಟಿ ತನಿಖೆ ಆರಂಭಕ್ಕೂ ಮುನ್ನ ಚಿನ್ನಯ್ಯ ಯೂಟ್ಯೂಬ್‌ಗೆ ಸಂದರ್ಶನ ಕೊಡುವ ವೇಳೆ ತಾನು ಸೌಜನ್ಯ ಹೆಣವನ್ನು ಹೊತ್ತುಕೊಂಡು ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ಆ ವಿಚಾರವನ್ನು ಉಲ್ಲೇಖಿಸಿ ಕುಸುಮಾ ದೂರು ನೀಡಲು ಮುಂದಾಗಿದ್ದಾರೆ.
ಚಿನ್ನಯ್ಯ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ 2012 ರಲ್ಲಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ನಡೆದಿತ್ತು. ಇತ್ತೀಚಿನ ಯೂಟ್ಯೂಬ್ ಸಂದರ್ಶನದಲ್ಲಿ ಚಿನ್ನಯ್ಯ ತಾನು ಸೌಜನ್ಯ ಅವರ ಹೆಣವನ್ನು ಹೊತ್ತುಕೊಂಡು ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದ. ಸೌಜನ್ ಪ್ರಕರಣದಲ್ಲಿ ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕುಸುಮಾ ಇಂದು ದೂರಿನ ಪ್ರತಿಯಲ್ಲಿ ಮನವಿ ಮಾಡಿದ್ದಾರೆ.
ಆದರೆ ಪೂರ್ವಾನುಮತಿ ಇಲ್ಲದೆ ಇರುವ ಕಾರಣ ಅಧಿಕಾರಿಗಳು ಕುಸಮಾ ಅವರನ್ನು ವಾಪಸ್ ಕಳುಹಿಸಿದ್ದಾರೆ. ಈ ಮೊದಲು ಗೃಹ ಸಚಿವ ಜಿ ಪರಮೇಶ್ವರ್ ಅವರು ಎಸ್‌ಐಟಿ ತನಿಖೆಯಲ್ಲಿ ಸೌಜನ್ಯ ಪ್ರಕರಣವನ್ನು ರಿ ಓಪನ್ ಮಾಡುವ ಪ್ರಮೇಯವೇ ಇಲ್ಲ ಎಂದಿದ್ದರು. ಪೂರ್ವಾನುಮತಿ ಹಾಗೂ ಎಸ್‌ಐಟಿಯಲ್ಲಿ ಈ ಬಗ್ಗೆ ಸಮಯ ನಿಗದಿಯಾಗದ ಕಾರಣ ಕುಸುಮಾ ಅವರನ್ನು ಅಧಿಕಾರಿಗಳು ಹಿಂದೆ ಕಳುಹಿಸಿದ್ದಾರೆ. ತಾವು ಸೂಚಿಸಿದ ಬಳಿಕ ಮತ್ತ ಬಂದು ದೂರು ನೀಡುವಂತೆ ಅವರಿಗೆ ಸಲಹೆ ನೀಡಿದ್ದಾರೆ.
ಇನ್ನು ಧರ್ಮಸ್ಥಳ ಪ್ರಕರಣ ಸಂಬಂಧ ಚಿನ್ನಯ್ಯ ಹೇಳಿದ್ದೆಲ್ಲವೂ ಸುಳ್ಳು ಎನ್ನುವುದು ಬಹುತೇಕ ಸಾಬೀತಾಗಿದೆ. ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದೆ ಬುರುಡೆ ಪ್ರಕರಣದ ಷಡ್ಯಂತ್ರದ ಬಗ್ಗೆ ಎಲ್ಲ ವಿಚಾರಗಳನ್ನು ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಚಿನ್ನಯ್ಯ ತನ್ನ ಅಣ್ಣ ತಾನಾಸಿಯಲ್ಲಿಯೂ ಹೇಳಿದ್ದು, ಆತನ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿಯ ತಂಡ ಚಿನ್ನಯ್ಯನ ಹುಟ್ಟೂರು ತಮಿಳುನಾಡಿನ ಚಿಕ್ಕರಸಂಪಾಳ್ಯ ಹಾಗೂ ಮಂಡ್ಯಕ್ಕೆ ತೆರಳಿ ತನಿಖೆ ನಡೆಸಿದೆ.
ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನೇತ್ರಾವತಿ ನದಿ ನೀರಿನಲ್ಲಿ ಹಲವು ಶವ ತೇಲಿ ಬರುತ್ತಿದ್ದವು. ಆ ಶವಗಳನ್ನು ಚಿನ್ನಯ್ಯ ಹೆಣ ಹೂಳುತ್ತಿದ್ದುದು ನಿಜ. ಆದರೆ, ಎಲ್ಲಾ ಶವಗಳನ್ನು ಪೊಲೀಸ್ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆ ಬಳಿಕವೇ ಚಿನ್ನಯ್ಯ ಶವ ಹೂಳುತ್ತಿದ್ದ. ನಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕೆಲ ಹೆಣಗಳನ್ನು ಹೂತಾಕಿದ್ದೂ ನಿಜ. ಆದರೆ ಸಾವಿರಾರು ಹೆಣ ಹೂತಿದ್ದೆ ಎನ್ನುವುದು ಸುಳ್ಳು. ಈ ಪ್ರಕರಣ ಇಷ್ಟು ದೊಡ್ಡದಾಗುತ್ತೆಂದು ಗೊತ್ತಿರಲಿಲ್ಲ. ಕೋರ್ಟ್‌ಗೆ ಕರೆದುಕೊಂಡು ಹೋದರೆ ನಾನು ಸತ್ಯ ಹೇಳುತ್ತೇನೆ. ನಾನು ಬುರುಡೆ ಗ್ಯಾಂಗ್ ನಂಬಿ ಮೋಸ ಹೋಗಿದ್ದು, ಅವರು ಹೇಳಿದಂತೆ ಕೇಳಿದ್ದೇನೆ ಎಂದು ಆತ ಬಾಯ್ಬಿಟ್ಟಿದ್ದಾನೆ.