ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಅನಾಮಿಕನ ಆರೋಪದ ಹಿನ್ನೆಲೆ ಎಸ್‌ಐಟಿ ತನಿಖೆ ನಡೆಯುತ್ತಿರುವ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ತನಿಖೆಯ ಮಧ್ಯಂತರ ವರದಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಧರ್ಮಸ್ಥಳ ಕುರಿತು ಅಪಪ್ರಚಾರ ನಡೆಯುತ್ತಿದ್ದು, ಧಾರ್ಮಿಕ ಭಾವನೆಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಸುರೇಶ್ ಕುಮಾರ್, ಅರಗ ಜ್ಞಾನೇಂದ್ರ ಸೇರಿದಂತೆ ಇತರೆ ಬಿಜೆಪಿ ಸದಸ್ಯರು, ಎಸ್ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ. ಎಸ್‌ಐಟಿ ತನಿಖೆಯ ಪ್ರಗತಿ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. “ಅನಾಮಿಕ ವ್ಯಕ್ತಿಯ ಮೂಲ ಏನು? ನಂತರ ತನಿಖೆ ಪೂರ್ಣಗೊಂಡ ಮೇಲೆ ಆತನು ಮಾನಸಿಕ ರೋಗಿ ಎಂದು ಹೇಳಿದರೆ, ಅದರ ಹೊಣೆಗಾರ್ಯಾರದು?” ಎಂಬ ಪ್ರಶ್ನೆಗಳನ್ನೂ ಎತ್ತಿದರು.
ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಿಸಿ, ಪ್ರಕರಣ ಗಂಭೀರವಾಗಿದ್ದು, ಸತ್ಯಾಸತ್ಯತೆ ಹೊರ ತರಲು ಎಸ್‌ಐಟಿ ತನಿಖೆ ನಡೆಯುತ್ತಿದೆ ಎಂದರು. ಆದರೆ, ತನಿಖೆಯ ಮಧ್ಯಂತರ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯಪ್ರವೇಶಿಸಿ, ಯಾವುದೇ ರಾಜಕೀಯ ದೃಷ್ಠಿಯಿಂದ ತನಿಖೆ ನಡೆಯುತ್ತಿಲ್ಲ, ನಮಗೆ ಎಲ್ಲರೂ ಬೇಕು. ಈ ಪ್ರಕರಣದಲ್ಲಿ ಯಾರನ್ನು ಸಿಲುಕಿಸುವ ಉದ್ದೇಶ ಇಲ್ಲ ಎಂದರು. ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಲ್ಲ ಎಂದರು.