Friday, April 4, 2025
Google search engine

Homeರಾಜ್ಯನಂದಿನಿ ಹೊರತುಪಡಿಸಿ ಉಳಿದ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆಗೆ ದಿನೇಶ್ ಗುಂಡೂರಾವ್ ಸೂಚನೆ

ನಂದಿನಿ ಹೊರತುಪಡಿಸಿ ಉಳಿದ ತುಪ್ಪದ ಸ್ಯಾಂಪಲ್‌ಗಳ ಪರಿಶೀಲನೆಗೆ ದಿನೇಶ್ ಗುಂಡೂರಾವ್ ಸೂಚನೆ

ಬೆಂಗಳೂರು: ನಂದಿನಿ ತುಪ್ಪ ಹೊರತುಪಡಿಸಿ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅದರ ಗುಣಮಟ್ಟ ಕಾಪಾಡಲು ಪರಿಶೀಲನೆ ಮಾಡಬೇಕು. ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪದ ಪರಿಶೀಲನೆ ಮಾಡಬೇಕು ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ನಮ್ಮ ಆಹಾರ ಸುರಕ್ಷತಾ ಆಯುಕ್ತರಿಗೆ ಹೇಳಿದ್ದೇನೆ. ಈಗಾಗಲೇ ಸ್ಯಾಂಪಲ್ ಕಲೆಕ್ಟ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ತಿರುಪತಿಯಲ್ಲಿ ಆದ ರೀತಿ ಕೊಬ್ಬಿನ ಅಂಶಗಳು ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಇದೆಯಾ ಎಂದು ನೋಡುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ. ಎಲ್ಲಾ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದು ತಿಳಿಸಿದರು.

ಪ್ರಸಾದದ ಪರಿಶೀಲನೆ ನಾವು ಮಾಡುತ್ತಿಲ್ಲ. ಬೇರೆ ಪದಾರ್ಥಗಳಲ್ಲಿ ಕಲಬೆರಕೆ ಆಗುವ ಸಾಧ್ಯತೆ ಕಡಿಮೆ. ಆದರೆ ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಾಂಶ ಇತ್ತೆಂದು ಹೇಳಿರುವುದು ಆತಂಕಕಾರಿಯಾದ ವಿಚಾರ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರ ಬಗ್ಗೆ ಶ್ರದ್ಧೆ ಇರೋರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದ್ದೇವೆ ಎಂದರು.

ವರದಿಯಲ್ಲಿ ಏನು ಬರುತ್ತೆ ಎಂದು ತಿಳಿದುಕೊಳ್ಳೋಣ. ಯಾಕೆಂದರೆ ಜನರಿಗೆ ಈ ವಿಚಾರದಲ್ಲಿ ಬಹಳ ಗೊಂದಲ ಶುರುವಾಗಿದೆ. ತಿರುಪತಿ ಲಡ್ಡು ವಿಚಾರದಲ್ಲಿ ಈ ರೀತಿ ಇದೆ ಎಂದು ಆದಾಗ ಯಾರನ್ನ ನಂಬಬೇಕು ಅನ್ನುವ ಪ್ರಶ್ನೆ ಎದುರಾಗಿದೆ. ನಾಳೆ ಪ್ರಸಾದವನ್ನು ಸ್ವೀಕರಿಸದೆ ಇರುವಂತ ಪರಿಸ್ಥಿತಿ ಹೋಗಬಹುದು. ಹಾಗಾಗಿ ನಮ್ಮ ಕಡೆಯಿಂದ ಪರಿಶೀಲನೆ ಮಾಡಿಸುತ್ತಿದ್ದೇವೆ. ಮೊದಲು ವರದಿ ಬರಲಿ ಬಳಿಕ ಮುಂದಿನ ಕ್ರಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular