ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬಾಲಕಿಯರಿಗೆ ಕ್ರೇಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ವತಿಯಿಂದ ಮೂವರು ವಿದ್ಯಾರ್ಥಿಗಳಿಗೆ ತಲಾ ರೂ.15 ಸಾವಿರಗಳ ವಿದ್ಯಾರ್ಥಿ ವೇತನವನ್ನು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ವಿತರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಆಯೋಜಿಸಿದ್ದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಉಷಾ, ವಿಂಧ್ಯಾ ಮತ್ತು ಶ್ವೇತಾ ಈ ಮೂವರು ವಿದ್ಯಾರ್ಥಿನಿಯರಿಗೆ ಸಹಾಯಧನ ಮತ್ತು ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮವಹಿಸಿ ವ್ಯಾಸಂಗ ಮಾಡಿ ಸಾಧನೆ ಮಾಡಲು ಸಂಕಲ್ಪಬದ್ಧರಾಗಬೇಕು ಹಾಗೂ ಈ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂ.15 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ ಎಂದರು. ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಜೋನಾಲ್ ಮ್ಯಾನೇಜರ್ ಹೆಚ್.ಕೆ.ಶಿವಲಿಂಗಯ್ಯ ಮಾತನಾಡಿ, ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವ್ಯಾಸಂಗ ಮಾಡಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಸಹ ಪ್ರೋತ್ಸಾಹ ಧನ ನೀಡುವುದರೊಂದಿಗೆ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಹೊಸಪೇಟೆ ರಿಜಿನಲ್ ಮ್ಯಾನೇಜರ್ ಐ.ಎಂ.ಮಂಜುನಾಥ್, ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಏರಿಯಾ ಮ್ಯಾನೇಜರ್ ಆರ್.ಹರೀಶ್, ಬ್ರಾಂಚ್ ಮ್ಯಾನೇಜರ್‍ಗಳಾದ ತಿರುಮಲೇಶ್, ಭರತ್, ಹರೀಶ್ ಕುಮಾರ್ ಇದ್ದರು