Friday, April 18, 2025
Google search engine

HomeUncategorizedರಾಷ್ಟ್ರೀಯಸರ್ಕಾರ ಬಜೆಟ್‌ ನಲ್ಲಿ ತಾರತಮ್ಯ: ಸಂಸತ್ತಿನ ಎದುರು ಇಂಡಿಯಾ ಬಣದ ನಾಯಕರ ಪ್ರತಿಭಟನೆ

ಸರ್ಕಾರ ಬಜೆಟ್‌ ನಲ್ಲಿ ತಾರತಮ್ಯ: ಸಂಸತ್ತಿನ ಎದುರು ಇಂಡಿಯಾ ಬಣದ ನಾಯಕರ ಪ್ರತಿಭಟನೆ

ನವದೆಹಲಿ: ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ ನಲ್ಲಿ ತಾರತಮ್ಯ ಮಾಡಿದೆ ಎಂದು ಇಂಡಿಯಾ ಬಣದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಸಂಸತ್ತಿನ ಎದುರು ಬುಧವಾರ ಧರಣಿ ನಡೆಸಿದರು.

ಟಿಎಂಸಿ, ಸಮಾಜವಾದಿ ಪಕ್ಷದ ನಾಯಕರು, ಡಿಎಂಕೆ ನಾಯಕರು ಸೇರಿದಂತೆ ಹಲವು ನಾಯಕರು ಸಂಸತ್ತಿನ ಮಕರ ದ್ವಾರದಲ್ಲಿ ‘ನಮಗೆ ಭಾರತ ಬಜೆಟ್ ಬೇಕು ಎನ್‌ಡಿಎ ಬಜೆಟ್ ಅಲ್ಲ’, ‘ಎನ್‌ಡಿಎಯಿಂದ ಬಜೆಟ್‌ನಲ್ಲಿ ಭಾರತಕ್ಕೆ ದ್ರೋಹ’ ಎಂಬ ಫಲಕಗಳನ್ನು  ಹಿಡಿದು ಪ್ರತಿಭಟಿಸಿದರು.

ಈ ಕುರಿತು ಮಾತನಾಡಿದ ಖರ್ಗೆ, ‘ಈ ಬಜೆಟ್‌ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್‌ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ.  ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಒಕ್ಕೂಟ ಸರ್ಕಾರವನ್ನು ಉಳಿಸಿಕೊಳ್ಳಲು ಕೇಂದ್ರ ಬಜೆಟ್‌ ಮೂಲಕ ಎಲ್ಲಾ ತತ್ವಗಳನ್ನು ಉಲ್ಲಂಘಿಸಿದೆ. ಸರ್ಕಾರವನ್ನು ರಕ್ಷಿಸಿಕೊಳ್ಳುವುದು ಬಜೆಟ್‌ನ ಉದ್ದೇಶವಾಗಿತ್ತು. ‌ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಅನುದಾನ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಇತರ ರಾಜ್ಯಗಳಿಗೂ ನ್ಯಾಯ ಸಿಗಬೇಕು. ಅದಕ್ಕಾಗಿಯೇ ನಾವು ಈ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಹೇಳಿದರು.

 ‘ಬಜೆಟ್‌ನಲ್ಲಿ ಯುವಕರಿಗೆ ಸುಳ್ಳು ಭರವಸೆಗಳನ್ನು ನೀಡಲಾಗಿದೆ’ ಎಂದು ಎಸ್‌ಪಿ ಸಂಸದೆ ಜಯಾ ಬಚ್ಚನ್ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular