ಬಳ್ಳಾರಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ. ಸಿಎಂ ಬದಲಾವಣೆ, ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಮುಂದೆ ಚರ್ಚೆ, ಪ್ರಸ್ತಾಪ ಇಲ್ಲ ಎಂದಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಬದಲಾವಣೆಯ ಚರ್ಚೆ ಇಲ್ಲವೆಂದು ಸ್ವತಃ ಖರ್ಗೆ ಸಾಹೇಬರೇ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗೇನಾದರು ಬದಲಾವಣೆ ಇದ್ದರೆ ನಿಮಗೆ ತಿಳಿಸುತ್ತೇವೆ ಎಂದಿದ್ದಾರೆ ಎಂದರು.
ಬದಲಾವಣೆ ಬಗ್ಗೆ ಪತ್ರಿಕೆಯವರು ಕಪೋಲಕಲ್ಪಿತ ಅನಿಸಿಕೆಗಳು ಬರುತ್ತಿವೆ. ಈ ಬಗ್ಗೆ ಯಾರೂ ಮಾತಾಡಬೇಡಿ ಎಂದು ಸೂಚನೆಯಿದೆ. ಖರ್ಗೆ ಅವರು ಹೇಳಿದ ಮೇಲೆ ರಾಜಣ್ಣನೂ ಸುಮ್ಮನಾಗಿದ್ದಾರೆ. ದೆಹಲಿಗೆ ಹೋಗುವವರು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ. ಸಿಎಂ ಬದಲಾವಣೆ, ಅಧ್ಯಕ್ಷರ ಬದಲಾವಣೆ ಬಗ್ಗೆ ಶಿಸ್ತಿನ ಕಾಂಗ್ರೆಸ್ ನಾಯಕರು ಯಾರೂ ಮಾತಾಡಬಾರದು ಎಂದು ಹೇಳಿದ್ದಾರೆ ನಾವು ಶಿಸ್ತಿನ ಪಕ್ಷದವರು ನಾವು ಪಕ್ಷದ ಸೂಚನೆ ಪಾಲನೆ ಮಾಡುತ್ತೇವೆ ಎಂದರು.
ಗೃಹ ಜ್ಯೋತಿ ಸಬ್ಸಿಡಿ ಹಣ ಸರ್ಕಾರದಿಂದ ಎಸ್ಕಾಂಗಳಿಗೆ ಪಾವತಿಯಾಗದ ವಿಚಾರಕ್ಕೆ ಮಾತನಾಡಿದ ಅವರು, ಗೃಹಜ್ಯೋತಿ ಹಣ, ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ. ಗ್ಯಾರಂಟಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಪಾವತಿಯಾಗದ ಗೃಹ ಜ್ಯೋತಿ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈಗಿರುವ ವ್ಯವಸ್ಥೆ ಏನಿದೆ ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾವ ಗ್ರಾಹಕರಿಗೂ ತೊಂದರೆಯಾಗದ ಹಾಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಗ್ಯಾರಂಟಿಯಿಂದ ಹೊರೆಯಾಗುವುದು ಬೇರೆ ವಿಚಾರ. ಆದರೆ 58 ಸಾವಿರ ಕೋಟಿ ಹಣ ಅಂದರೆ ಸಣ್ಣ ಮೊತ್ತವಲ್ಲ. ಜನರಿಗಾಗಿ ಗ್ಯಾರಂಟಿ ಪ್ರಾರಂಭ ಮಾಡಿದ್ದೇವೆ, ನಮಗೆ ಬದ್ದತೆಯಿದೆ, ಮುಂದುವರೆಸುತ್ತೇವೆ. ನಮ್ಮ ಪಕ್ಷದ ಯಾವುದೇ ಶಾಸಕರೂ ಗ್ಯಾರಂಟಿ ವಿರುದ್ದ ಇಲ್ಲ. ಯಾರೂ ಕಡಿತ ಮಾಡಿ ಎಂದು ಹೇಳಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ದಲಿತ ನಿಗಮಗಳಿಗೆ ಹಣ ಬಿಡುಗಡೆ ಮಾಡದ ವಿಚಾರಕ್ಕೆ ಮಾತನಾಡಿದ ಅವರು, ಇನ್ನೇನು ಹತ್ತು ದಿನದಲ್ಲಿ ಬಜೆಟ್ ಇದೆ. ಅದಕ್ಕೆ ಬಜೆಟ್ ನಲ್ಲಿ ಉತ್ತರ ಸಿಗಲಿದೆ ಎಂದರು.