ಮಣಿಪುರ : ಮಣಿಪುರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿರುವ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಈ ಬಗ್ಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬೆನ್ನಲ್ಲೇ ಅಪರಿಚಿತರು ಹಿರಿಯ ಪತ್ರಕರ್ತ ಲಾಬಾ ಯಮ್ಬೆಮ್ ಎಂಬವರನ್ನು ಅಪಹರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಿಎಂ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಮಣಿಪುರದಲ್ಲಾದ ರಾಜಕೀಯ ಬೆಳವಣಿಗೆ ಬಗ್ಗೆ ಪತ್ರಕರ್ತ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. ಬಳಿಕ ಮನೆಗೆ ತೆರಳಿದ್ದರು. ಈ ವೇಳೆ ಅಪಹರಣ ನಡೆದಿದೆ ಎಂದು ಲಾಬಾ ಸಹೋದರ, ನಿವೃತ್ತ ಸೇನಾ ಮೇಜರ್ ಯಮ್ಬೆಮ್ ಅಂಗಾಂಬ ಹೇಳಿದ್ದಾರೆ. ರಾಷ್ಟ್ರೀಯ ದೈನಂದಿನ ಮಾಧ್ಯಮ ಸ್ಟೇಟ್ಸ್‌ಮ್ಯಾನ್‌ನಲ್ಲಿ ವಿಶೇಷ ವರದಿಗಾರರಾಗಿ ೬೯ ವರ್ಷದ ಲಾಬಾ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಜಾನೆ ಸುಮಾರು ಶಸ್ತ್ರಸಜ್ಜಿತ ೧೫-೨೦ ಜನರು ಅಪಹರಣ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಯಾವ ಸ್ಥಳದಲ್ಲಿ ಅಪಹರಣ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಎರಡು ದಿನಗಳ ಹಿಂದಷ್ಟೇ ಲಾಬಾ ಯಮ್ಬೆಮ್ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಣಿಪುರದಲ್ಲಿ ಶಸ್ತ್ರಾಸ್ತ್ರ ಗುಂಪಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ಪೊಲೀಸರು ಅಪರಿಚಿತ ದಾಳಿಕೋರರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದರು.
“ಅಪಹರಣ ಮಾಡಿದವರು ಲಾಬಾ ಮಣಿಪುರ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದರಿಂದ ಸಿಟ್ಟುಗೊಂಡಿರಬಹುದು. ಆದರೆ ಪತ್ರಕರ್ತರಿಗೆ ಸಮಾಜದಲ್ಲಿ ಏನು ನಡೆಯುತ್ತಿದೆಯೋ ಅದರ ಬಗ್ಗೆ ಮಾತನಾಡುವ ಹಕ್ಕಿದೆ. ಲಾಬಾ ಅವರನ್ನು ಶೀಘ್ರವೇ ಬಿಡುಗಡೆಮಾಡುವಂತೆ ನಾವು ಮನವಿ ಮಾಡುತ್ತೇವೆ” ಎಂದು ಸಹೋದರ ಹೇಳಿದ್ದಾರೆ. ಬಿರೇನ್ ಸಿಂಗ್ ಮಣಿಪುರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಮುಂದಿನ ಸಿಎಂ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ತೊಡಗಿದೆ. ಅದಕ್ಕಾಗಿ ನಿರಂತರವಾಗಿ ಸಭೆ ನಡೆಸುತ್ತಲ್ಲೇ ಇದೆ. ಈ ಬಿಕ್ಕಟ್ಟಿನ ಬಗ್ಗೆ ಲಾಬಾ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.