ಶಿವಮೊಗ್ಗ: ಕುಡಿಯುವ ನೀರಿಗೆ ಆದ್ಯತೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸುವಂತೆ ಸಂಸದರಾದ ಬಿ.ವೈ ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಗತಿಯಲ್ಲಿರುವ ಕಾಮಗಾರಿಗೆ ಚುನಾವಣೆ ಅಡಚಣೆ ಆಗುವುದಿಲ್ಲ. ಆದ್ದರಿಂದ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದರು. ವಿಕಲಚೇತನರಿಗೆ ವಾಹನ ನೀಡಿರಿ : ವಿಕಲಚೇತನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಮಂಜೂರಾದ ರೆಟ್ರೋವ್ಹೀಲ್ ಫಿಟ್ಟೆಡ್ ಮೋಟಾರ್ ಸೈಕಲ್‍ಗಳನ್ನು ಚುನಾವಣೆ ಆಗುವವರೆಗೆ ಕಾಯದೆ ಮಾರ್ಚ್ 5 ಅಥವಾ 6 ರಂದು ಕಾರ್ಯಕ್ರಮ ಆಯೋಜಿಸಿ ನೀಡುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗವಿಕಲ ಕಲ್ಯಾಣಾಧಿಕಾರಿ ಚಂದ್ರಪ್ಪ ಮಾತನಾಡಿ ಪ್ರಸ್ತುತ 53 ವಾಹನಗಳು ಸಿದ್ದವಿದ್ದು ನೀಡಲಾಗುವುದು. ರಾಜ್ಯ ಸರ್ಕಾರದಿಂದ 140 ವಾಹನಗಳಿಗೆ ಮಂಜೂರಾತಿ ದೊರೆತಿದೆ. ಹಾಗೂ ಕೇಂದ್ರ ಸರ್ಕಾರದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜಿಲ್ಲೆಯ ವಿಕಲಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಸಾಧನ ಸಲಕರಣೆ ವಿತರಿಸುವ ಶಿಬಿರವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.
ಬಿಎಸ್‍ಎನ್‍ಎಲ್ ನೆಟ್‍ವರ್ಕ್ : ಮೊಬೈಲ್ ನೆಟ್‍ವರ್ಕ್ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಕೇಂದ್ರ ಸರ್ಕಾರ ಗುಡ್ಡಗಾರು, ನೆಟ್‍ವರ್ಕ್ ಇಲ್ಲದ ಸುಮಾರು 252 ಗ್ರಾಮಗಳಿಗೆ ನೆಟ್‍ವರ್ಕ್ ಟವರ್ ಸ್ಥಾಪಿಸಲು ಮಂಜೂರಾತಿ ನೀಡಿದೆ. ಇದುವರೆಗೆ 161 ಕಡೆ ಕೆಲಸ ಆರಂಭಿಸಲು ಸಿದ್ದವಾಗಿದೆ. 44 ಪ್ರಗತಿಯಲ್ಲಿದ್ದು ಮತ್ತು 14 ಕಾಮಗಾರಿ ಪೂರ್ಣಗೊಂಡಿದೆ. ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರು ಸಹಕರಿಸಬೇಕು. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಪ್ರಗತಿ ಏನೂ ಸಾಲದು. ಆದ್ದರಿಂದ ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳು ಸಮನ್ವಯದೊಂದಿಗೆ ಸಹಕರಿಸಬೇಕು. ಅಪರ ಜಿಲ್ಲಾಧಿಕಾರಿಗಳು ಈ ಕಡೆ ವಿಶೇಷ ಗಮನ ಹರಿಸಬೇಕೆಂದರು.
ಕುಡಿಯುವ ನೀರು ಯಾವತ್ತಿಗೂ ಮೊದಲನೇ ಆದ್ಯತೆ. ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟು 126 ಓವರ್‍ಹೆಡ್ ಟ್ಯಾಂಕ್‍ಗೆ ಮಂಜೂರಾತಿ ದೊರೆತಿದೆ. ಸೊರಬ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಗುತ್ತಿಲ್ಲ. ಹೊಸನಗರದ ಬ್ರಹ್ಮೇಶ್ವರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಕ್ಕಪಕ್ಕ ಇರುವ ಜಾಗದಲ್ಲಿ ಬೋರ್ ಕೊರೆಸಿ 5 ಇಂಚು ನೀರು ಬಿದ್ದಿದ್ದು ಅರಣ್ಯ ಇಲಾಖೆಯವರು ಬೋರ್ ಮುಚ್ಚಿಹಾಕಿರುವುದು ಸರಿಯಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದರು
ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪ್ಯಾಚ್‍ವರ್ಕ್ ಕಳಪೆಯಾಗಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲಿ ಇದನ್ನು ಗುಣಮಟ್ಟದೊಂದಿಗೆ ಸರಿಪಡಿಸಬೇಕೆಂದರು.ಸಭೆಗೆ ಹಾಜರಾಗದ ಕೆಆರ್‍ಐಡಿಎಲ್ ಕಾರ್ಯಪಾಲಕ ಇಂಜಿನಿಯರ್‍ರವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸುರೇಶ್, ನಾಗರತ್ನ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಎಸ್‍ಪಿ ಮಿಥುನ್ ಕುಮಾರ್, ಎಡಿಸಿ ಸಿದ್ದಲಿಂಗರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.