ರಾಮನಗರ: ಸಕಾಲ ಯೋಜನೆಯ ಅನುಷ್ಟಾನದಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಲು ಎಲ್ಲಾ ಅಧಿಕಾರಿಗಳು ನಿಗಧಿಪಡಿಸಿದ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಡಿ. ೩೧ರ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ಒದಗಿಸಲಾಗುತ್ತಿರುವ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಯೋಜನೆಯಡಿ ಇಲಾಖೆಗಳಿಗೆ ನಿಗದಿಪಡಿಸಿದ ಯೋಜನೆಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು ಹಾಗೂ ಸ್ವೀಕರಿಸಿದ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಇದರಿಂದ ಸಕಾಲ ಯೋಜನೆಯಡಿ ಜಿಲ್ಲೆಯು ಉತ್ತಮ ರ್‍ಯಾಂಕಿಂಗ್‌ಗಳಿಸಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಸಕಾಲ ಯೋಜನೆಯನ್ನು ಪ್ರತಿದಿನ, ಪ್ರತಿ ವಾರ, ಪ್ರತಿ ಮಾಹೆವಾರು ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ಈ ಕುರಿತು ಹೆಚ್ಚು ನಿಗಾ ವಹಿಸುವ ಮೂಲಕ ಸಕಾಲ ಯೋಜನೆಯನ್ನು ಯಶಸ್ವಿಗೊಳಿಸುವುದರೊಂದಿಗೆ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.