Thursday, April 3, 2025
Google search engine

Homeರಾಜ್ಯಸಭಾಧ್ಯಕ್ಷರ ಪೀಠಕ್ಕೆ ಅಗೌರವ; ಪಾಠ ಕಲಿಯಲೆಂದೇ ಶಾಸಕರ ಅಮಾನತು: ಯು.ಟಿ.ಖಾದರ್‌

ಸಭಾಧ್ಯಕ್ಷರ ಪೀಠಕ್ಕೆ ಅಗೌರವ; ಪಾಠ ಕಲಿಯಲೆಂದೇ ಶಾಸಕರ ಅಮಾನತು: ಯು.ಟಿ.ಖಾದರ್‌

ಬೆಂಗಳೂರು: ಅಮಾನತುಗೊಂಡಿರುವ ಶಾಸಕರೆಲ್ಲರೂ ಆಪ್ತಮಿತ್ರರೇ. ಅವರನ್ನು ಅಮಾನತು ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಎಂಬ ನೋವಿದೆ. ಭಾವನಾತ್ಮಕ ವಿಚಾರ ಇಟ್ಟುಕೊಂಡರೆ ಸಂವಿಧಾನಬದ್ಧವಾಗಿ ಕೆಲಸ ಮಾಡಲು ಸಾಧ್ಯವೇ? ಯು.ಟಿ. ಖಾದರ್‌ ಆಗಿ ಕ್ಷಮಿಸಬಹುದು. ಪೀಠಕ್ಕೆ ಅಗೌರವ ತೋರಿದಾಗ ಸ್ಪೀಕರ್‌ ಆಗಿ ಕ್ಷಮಿಸಲು ಸಾಧ್ಯವಿಲ್ಲ. ಪಾಠ ಕಲಿಯಲಿ ಎಂದೇ ಅಮಾನತು ಮಾಡಿದ್ದೇನೆ. ಆದೇಶ ಹಿಂಪಡೆಯಲು ಅವರು ಮನವಿ ಮಾಡಿದಾಗ ಚರ್ಚಿಸಬಹುದು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಧ್ಯಾಹ್ನ 12 ಗಂಟೆ ವೇಳೆಗೆ ಘಟನೆ ನಡೆದಿದೆ. ಸಂಜೆ 4 ಗಂಟೆಗೆ ಸದನ ಆರಂಭವಾದದ್ದು. ಸೌಜನ್ಯಕ್ಕಾದರೂ ಬಂದು ಹೆಚ್ಚು-ಕಮ್ಮಿಯಾಗಿದೆ ಎಂದು ಕೇಳಬೇಕಿತ್ತು. ನಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಬರಬೇಕಿತ್ತು. ಸಾಂವಿಧಾನಿಕ ಪೀಠಕ್ಕೆ ಅಗೌರವ ಆಗಿದೆ, ಈ ರೀತಿ ಮಾಡಬಾರದಿತ್ತು, ಭಾವನಾತ್ಮಕವಾಗಿ ವರ್ತಿಸಿದೆವು ಎಂಬ ಅರಿವಿರಬೇಕಿತ್ತು. ಅಷ್ಟಾದರೂ ಮತ್ತೆ ಕಲಾಪ ಆರಂಭ ಆದಾಗಲೂ ಅದೇ ವರ್ತನೆ ಮುಂದುವರಿದರೆ ಏನು ಅರ್ಥ? ಈ ರೀತಿಯ ವರ್ತನೆಗಳನ್ನು ಸಹಿಸಲು ಸಾಧ್ಯವಿದೆಯೇ? ಇದು ಸರಿ ಹೋಗಬೇಕು. ಭವಿಷ್ಯದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಸಭೆಗಳಲ್ಲೂ ಈ ವರ್ತನೆ ಮರುಕಳಿಸಬಹುದು. ಅದಾಗಬಾರದು ಎಂದರೆ ಒಂದು ಸಂದೇಶ ಕೊಡಬೇಕಲ್ಲವೇ? ಸಂವಿಧಾನದ ಪೀಠದ ಗೌರವ ಉಳಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

ಸದನಕ್ಕಿಂತ ದೊಡ್ಡದು ಯಾವುದೂ ಇಲ್ಲ
ಸಂವಿಧಾನಬದ್ಧವಾಗಿ ಸದನಕ್ಕಿಂತ ದೊಡ್ಡದು ಬೇರೆ ಯಾವುದೂ ಇಲ್ಲ. ಸದನದಲ್ಲಿ ಸಭಾಧ್ಯಕ್ಷರ ಪೀಠಕ್ಕಿಂತ ದೊಡ್ಡದು ಮತ್ತೇನೂ ಇಲ್ಲ. ಬಜೆಟ್‌ ಮೇಲಿನ ಚರ್ಚೆ ಮುಗಿಸಿ ಕುಳಿತಿದ್ದ ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ದಿಢೀರನೆ ಎದ್ದುನಿಂತು ಮಹತ್ವದ ವಿಚಾರ ಪ್ರಸ್ತಾವಿಸಬೇಕು ಎಂದಾಗ ಅವಕಾಶ ಕೊಟ್ಟೆ. ಎರಡೂ ಕಡೆ ಚರ್ಚೆ ನಡೆದ ಅನಂತರ ದೂರು ಬಂದ ಕೂಡಲೇ ಉನ್ನತ ಮಟ್ಟದ ತನಿಖೆ ಮಾಡಿಸುವುದಾಗಿ ಗೃಹಸಚಿವರು ಉತ್ತರಿಸಿದ್ದರು.

ಮರುದಿನ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಲು ಸಿಎಂ ಮುಂದಾದಾಗಲೂ ವಿಪಕ್ಷದ ನಾಯಕರು ಎದ್ದುನಿಂತಾಗ ಅವಕಾಶ ಮಾಡಿಕೊಟ್ಟೆ. ಮತ್ತೆ ಅದೇ ವಿಷಯ ಪ್ರಸ್ತಾವಿಸಿದರು. ಕೆಲವರು ಸಿಬಿಐ ತನಿಖೆ ಎಂದರೆ, ಮತ್ತೆ ಕೆಲವರು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದರು. ಇನ್ನೂ ಹಲವರು ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದರು. ಎಲ್ಲಕ್ಕೂ ಒಪ್ಪಿದ ಸಿಎಂ, ತನಿಖೆಗೆ ವಹಿಸುವ ಸಂದರ್ಭದಲ್ಲಿ ಎಲ್ಲರ ಸಲಹೆಗಳನ್ನೂ ಪರಿಗಣಿಸುವುದಾಗಿ ಭರವಸೆ ನೀಡಿದ್ದರು.

ಇವರ ಗದ್ದಲಕ್ಕೆ ಹೆದರಿ ಕಲಾಪ ನಿಲ್ಲಿಸಬೇಕಿತ್ತೇ?
ಗೃಹ ಸಚಿವರು, ಸಿಎಂ ಅಷ್ಟೆಲ್ಲಾ ಸ್ಪಷ್ಟವಾಗಿ ಭರವಸೆ ಕೊಟ್ಟ ಮೇಲೂ ಈಗಲೇ ಸ್ಪಷ್ಟಪಡಿಸಬೇಕು, ಇಲ್ಲದಿದ್ದರೆ ಬಜೆಟ್‌ ಮೇಲೆ ಉತ್ತರಿಸಲು ಬಿಡಲ್ಲ ಎಂದೆಲ್ಲ ಹೇಳಲಾರಂಭಿಸಿದರು. ಧನ ವಿನಿಯೋಗ ಮಸೂದೆ ಅನುಮೋದನೆ ದೊರಕಬಾರದು ಎಂದು ಗೊಂದಲ ಸೃಷ್ಟಿಸಿದರು. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು, ದಿಕ್ಸೂಚಿ ಸಂದೇಶ ಕೊಡುವ ಕ್ರಮ ಆಗಿದೆ ಎಂದು ತಮ್ಮ ನಿಲುವನ್ನು ಸ್ಪೀಕರ್‌ ಸಮರ್ಥಿಸಿಕೊಂಡರು.

ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ
ಅಧಿವೇಶನದ ಅಂತಿಮ ದಿನವಾದ ಮಾ. 21ರಂದು ವಿಪಕ್ಷದ ಕೆಲ ಶಾಸಕರು ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿ ನಮ್ಮ ಹಿರಿಯರು ಹಾಕಿಕೊಟ್ಟ ಶಿಷ್ಟಾಚಾರ, ಸತ್ಸಂಪ್ರದಾಯ, ಪ್ರಜಾಪ್ರಭುತ್ವಕ್ಕೆ ಧಮ್ಕಿ ಹಾಕುವಂತಹ ದಾಳಿ ಹಾಗೂ ವಿಪಕ್ಷದಲ್ಲಿನ ಹಿರಿಯರ ಮರ್ಗದರ್ಶನದ ಮೇರೆಗೆ ಮಾಡಿರುವ ದಾಳಿಗಳು ವಿಪಕ್ಷ ನಾಯಕರಾದಿಯಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ. ಹೀಗಾಗಿ ಪೀಠದ ಆದೇಶವನ್ನು ಲೆಕ್ಕಿಸದೆ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡ 18 ಶಾಸಕರನ್ನು 6 ತಿಂಗಳವರೆಗೆ ಸದನಕ್ಕೆ ಬಾರದಂತೆ ತಡೆಹಿಡಿದು ಅತ್ಯಂತ ಬೇಸರ ಹಾಗೂ ಅನಿವಾರ್ಯತೆಯಿಂದ ಅಮಾನತುಗೊಳಿಸಿದ್ದೇನೆ ಎಂದು ಸ್ಪೀಕರ್‌ ಹೇಳಿದರು.

ಪೀಠಕ್ಕೆ ಅಗೌರವ ತೋರಿದಾಗ ಸಹಿಸಲಾಗುವುದಿಲ್ಲ. ಭವಿಷ್ಯದಲ್ಲಿ ಇದು ಮರುಕಳಿಸಬಾರದು ಎಂಬ ಉದ್ದೇಶದಿಂದ ಅಮಾನತು ಮಾಡಲಾಗಿದೆ. ಅವರ ತಪ್ಪಿನ ಅರಿವು ಅವರಿಗಾಗಬೇಕು.

ಯು.ಟಿ. ಖಾದರ್‌, ವಿಧಾನಸಭಾಧ್ಯಕ್ಷ

ಹನಿಟ್ರ್ಯಾಪ್‌ ವಿಚಾರದಲ್ಲಿ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. 18 ಶಾಸಕರು ಸಭಾಧ್ಯಕ್ಷರ ಪೀಠದ ಕಡೆ ಹೋಗಿ ಗಲಾಟೆ ಮಾಡಿದರು ಎನ್ನುವ ಕಾರಣಕ್ಕೆ ಸಭಾಧ್ಯಕ್ಷರು ಅವರನ್ನೆಲ್ಲಾ 6 ತಿಂಗಳು ಅಮಾನತು ಮಾಡಿದ್ದಾರೆ. ಅದು ಅವರ ವಿವೇಚನೆ. ಅದನ್ನು ನಾವು ಪ್ರಶ್ನಿಸಲಾಗಲ್ಲ.

– ಡಾ| ಜಿ. ಪರಮೇಶ್ವರ್‌, ಗೃಹಸಚಿವ

RELATED ARTICLES
- Advertisment -
Google search engine

Most Popular