ಹೊಸದಿಲ್ಲಿ : ರೈತರ ದಿಲ್ಲಿ ಚಲೋ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ ಗಡಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ದಿಲ್ಲಿ-ಹರ್ಯಾಣದ ಸಿಂಘು ಗಡಿ ಹಾಗೂ ದಿಲ್ಲಿ-ನೋಯ್ಡಾ ಗಡಿಯಲ್ಲಿ ರಸ್ತೆ ಸಂಚಾರ ಸ್ತಬ್ದಗೊಂಡಿತು ಎಂದು ಅವರು ತಿಳಿಸಿದ್ದಾರೆ.
ಟಿಕ್ರಿ, ಸಿಂಘು, ಗಾಝಿಪುರ ಗಡಿಗಳಲ್ಲಿ ಹಾಗೂ ರೈಲ್ವೆ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಣ್ಗಾವಲು ಇರಿಸುವಂತೆ ದಿಲ್ಲಿ ಪೊಲೀಸರು ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಎರಡು ಪ್ರಮುಖ ಸಂಘಟನೆಗಳಾದ ಕಿಸಾನ್ ಮಜ್ದೂರ್ ಮೋರ್ಚಾ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ದಿಲ್ಲಿಯಲ್ಲೆ ಸೇರುವಂತೆ ದೇಶಾದ್ಯಂತದ ರೈತರಿಗೆ ಮಾರ್ಚ್ ೩ರಂದು ಕರೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಈ ಸೂಚನೆಗಳನ್ನು ನೀಡಿದ್ದಾರೆ. “ನಾವು ಸಿಂಗು ಹಾಗೂ ಟಿಕ್ರಿ ಗಡಿಯಲ್ಲಿ ಪಾದಚಾರಿಗಳಿಗಾಗಿ ಬ್ಯಾರಿಕೇಡ್‌ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ್ದೇವೆ. ಆದರೆ, ನಿರಂತರ ಹಾಗೂ ಕಠಿಣ ಕಣ್ಗಾವಲಿಗೆ ಪೊಲೀಸರು ಹಾಗೂ ಅರೆ ಸೇನಾ ಪಡೆಯ ಸಿಬ್ಬಂದಿ ಇರಲಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ನಡುವೆ ರೈತ ನಾಯಕ ಸರವನ್ ಸಿಂಗ್ ಪಂಧೇರ್, ದಿಲ್ಲಿಗೆ ಆಗಮಿಸುತ್ತಿದ್ದ ೧೦೦ಕ್ಕೂ ಅಧಿಕ ರೈತರನ್ನು ರಾಜಸ್ಥಾನದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ದಿಲ್ಲಿಯಲ್ಲಿ ಭಾರಿ ಪಡೆಗಳನ್ನು ನಿಯೋಜಿಸುವ ಮೂಲಕ ಕೇಂದ್ರ ಸರಕಾರ ಪ್ರತಿಭಟನೆ ಪಂಜಾಬ್ ಹಾಗೂ ಹರ್ಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ನಡೆಯುತ್ತಿದೆ ಎಂದು ಒಪ್ಪಿಕೊಂಡಿದೆ ಎಂದು ಪಂಜಾಬ್-ಹರ್ಯಾಣ ಗಡಿಯಲ್ಲಿ ಅಂಬಾಲ ಸಮೀಪದ ಶಂಭು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಪಂಧೇರ್ ತಿಳಿಸಿದ್ದಾರೆ.