Thursday, April 3, 2025
Google search engine

Homeರಾಜ್ಯಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣನ್ನು ಮಾತ್ರ ವಿತರಿಸಿ; ಚಿಕ್ಕಿ ವಿತರಣೆಗೆ ನಿರ್ಬಂಧ: ಸರಕಾರ...

ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣನ್ನು ಮಾತ್ರ ವಿತರಿಸಿ; ಚಿಕ್ಕಿ ವಿತರಣೆಗೆ ನಿರ್ಬಂಧ: ಸರಕಾರ ಆದೇಶ

ಬೆಂಗಳೂರು : ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸಬೇಕು. ಚಿಕ್ಕಿ ವಿತರಣೆ ಮಾಡಬಾರದು ಎಂದು ರಾಜ್ಯ ಸರಕಾರ ಸೋಮವಾರದಂದು ಆದೇಶಿಸಿದೆ.

2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ(ಮಧ್ಯಾಹ್ನ ಉಪಹಾರ ಯೋಜನೆ) 1 ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣು/ಚಿಕ್ಕಿಯನ್ನು ವಿತರಿಸಲು ಆದೇಶಿಸಲಾಗಿತ್ತು.

ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎನ್ನಬಹುದಾದ ಕೊಬ್ಬಿನಾಂಶ ಹೆಚ್ಚಿಗೆ ಇದೆ. ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಅಲ್ಲದೆ ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದಿದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಚಿಕ್ಕಿ ವಿತರಣೆಯನ್ನು ಸ್ಥಗಿತಗೊಳಿಸಿ, ಮೊಟ್ಟೆ ಅಥವಾ ಬಾಳೆಹಣ್ಣು ಮಾತ್ರ ವಿತರಿಸಲು ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಆಯುಕ್ತರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸಲು ಅನುಮತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷೇಧಿಕಾರಿ ಮತ್ತು ಪದನಿಮಿತ್ತ ಸರಕಾರದ ಅಧೀನ ಕಾರ್ಯದರ್ಶಿ (ಯೋಜನೆ) ವೈ.ಸಿ. ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular