ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಂಘದ ಗ್ರಾಮೀಣ ಪತ್ರಕರ್ತರ ಬಹುದಿನದ ಬೇಡಿಕೆಯಾದ ಬಸ್ ಪಾಸ್ ವಿತರಣೆಗೆ ಶೀಘ್ರದಲ್ಲಿ ಚಾಲನೆ ದೊರೆಯಲಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ್ ತಿಳಿಸಿದರು.
ಕೊಡಗು ಜಿಲ್ಲೆ ಕುಶಾಲನಗರದ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು, ರಾಜ್ಯ ಸಂಘ ವತಿಯಿಂದ ಈಗಾಗಲೇ ಹಲವು ಬಾರಿ ಈ ಹಿಂದೆ ಇದ್ದ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದು ಬಹು ವರ್ಷಗಳ ಸತತ ಪ್ರಯತ್ನದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ಯೋಜನೆಗೆ ಅನುಮತಿ ನೀಡಿದ ಹಿನ್ನೆಲೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿದ್ದು ಶೀಘ್ರ ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಜಾರಿಯಾಗಲಿದೆ ಎಂದರು.
ಪತ್ರಕರ್ತರು ಎಂದರೆ ಕೇವಲ ಐಡಿ ಕಾರ್ಡ್ ತೋರಿಸಲು ಸೀಮಿತರಾಗದೆ ಸಮಾಜದಲ್ಲಿನ ಅಂಕುಡೊಂಕು ಸರಿಪಡಿಸಲು ಜಾಗೃತರಾಗಿ ಸುಳ್ಳು ಸುದ್ದಿ ಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದರು.
ಈ ವೇಳೆ ತಾಲೂಕು ಸಂಘ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಹಾಗು ಜಿಲ್ಲಾ ಸಂಘ ನಿರ್ದೇಶಕ ಸಿ.ಎನ್ ವಿಜಯ್ ರಾಜ್ಯಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.